Home ಮುಖಪುಟ ಸುದ್ದಿ ವಿಧ್ವಂಸಕ ಕೃತ್ಯಕ್ಕೆ ಸಂಚು: ನಾಲ್ವರು ಉಗ್ರರ ಬಂಧನ

ವಿಧ್ವಂಸಕ ಕೃತ್ಯಕ್ಕೆ ಸಂಚು: ನಾಲ್ವರು ಉಗ್ರರ ಬಂಧನ

ಹೊಸ ದೆಹಲಿ.ಜು೨: ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಭಾರಿ ಪ್ರಮಾಣದ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಬೆಂಬಲಿತ ಅಂತರ-ರಾಜ್ಯ ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಜಾಲವನ್ನು ದೆಹಲಿ ಪೊಲೀಸರ ವಿಶೇಷ ಘಟಕ ಯಶಸ್ವಿಯಾಗಿ ಭೇದಿಸಿದೆ. ಕಾರ್ಯಾಚರಣೆಯಲ್ಲಿ ಪಂಜಾಬ್ ಮೂಲದ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.


ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಉಗ್ರಗಾಮಿ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಮತ್ತು ಆತನ ಸಹಚರರ ಸೂಚನೆ ಮೇರೆಗೆ ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಈ ಜಾಲವು ಯೋಜನೆ ರೂಪಿಸಿತ್ತು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪಂಜಾಬ್‌ನ ತರನ್ ತಾರನ್ ನಿವಾಸಿಗಳಾದ ಶುಭದೀಪ್ ಸಿಂಗ್ ಅಲಿಯಾಸ್ ವಿಶಾಲ್ (೨೩), ಗುರ್ಜಂತ್ ಸಿಂಗ್ ಅಲಿಯಾಸ್ ರಿಷಿ (೨೨), ಅಮೃತಸರದ ಸಜನ್ ಸಿಂಗ್ ಅಲಿಯಾಸ್ ಹನಿ (೨೮) ಮತ್ತು ಫತೇಘರ್ ಸಾಹಿಬ್ ನಿವಾಸಿ ಗಗನ್‌ಪ್ರೀತ್ (೨೪) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಜಿಗಾನಾ ಪಿಸ್ತೂಲ್ ಮತ್ತು ಒಂದು .೩೦ ಬೋರ್ ಪಿಸ್ತೂಲ್ ಸೇರಿದಂತೆ ೨ ಮಾರಕಾಸ್ತ್ರಗಳು, ೯ ಜೀವಂತ ಗುಂಡುಗಳು ಹಾಗೂ ೫ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ತಮ್ಮ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಒದಗಿಸಿದ್ದ ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಇವರೊಂದಿಗೆ ಸಂಪರ್ಕದಲ್ಲಿದ್ದ ಇತರ ಸಹಚರರಿಗಾಗಿ ಜಾಲ ಬೀಸಲಾಗಿದೆ. ದೆಹಲಿ ಪೊಲೀಸರ ಈ ಸಕಾಲಿಕ ಕಾರ್ಯಾಚರಣೆಯಿಂದಾಗಿ ಸಂಭವನೀಯ ಭಾರಿ ಸರಣಿ ಸ್ಫೋಟ ಅಥವಾಖಿಚಿಡಿgeಣeಜ ದಾಳಿಯೊಂದು ತಪ್ಪಿದಂತಾಗಿದೆ.