Home ಕ್ರೈಂ ಸುದ್ದಿಗಳು ಮಾಧ್ಯಮದವರ ಹೆಸರಿನಲ್ಲಿ ಸ್ಪಾ ನುಗ್ಗಿ ಹಲ್ಲೆ, ಸುಲಿಗೆ ನಾಲ್ವರು ಮಹಿಳೆಯರು ಸೇರಿ ಆರು ಮಂದಿ ಬಂಧನ

ಮಾಧ್ಯಮದವರ ಹೆಸರಿನಲ್ಲಿ ಸ್ಪಾ ನುಗ್ಗಿ ಹಲ್ಲೆ, ಸುಲಿಗೆ ನಾಲ್ವರು ಮಹಿಳೆಯರು ಸೇರಿ ಆರು ಮಂದಿ ಬಂಧನ

ಬೆಂಗಳೂರು,ಅ.೧೭-ಸಂಘಟನೆ ಮತ್ತು ಮಾಧ್ಯಮದವರ ಹೆಸರಿನಲ್ಲಿ ಸ್ಪಾ ಹಾಗೂ ಸಲೂನ್‌ಗೆ ತೆರಳಿ ಅಕ್ರಮ ಚಟುವಟಿಕೆಗಳ ನೆಪದಲ್ಲಿ ಬೆದರಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ನಂದಿನಿಲೇಔಟ್ ನ ಬುದ್ದನಗರದ ಈರಮ್ಯ.ಕೆ ಅಲಿಯಾಸ್ ಲಕ್ಷ್ಮಿ(೩೯) ಯಶವಂತಪುರದ ಬಂಡಪ್ಪ ರಸ್ತೆಯ ಸಗಾಯ್ ಮೇರಿ ಅಲಿಯಾಸ್ ಅಮ್ಮು(೪೦) ಗೊರಗುಂಟೆ ಪಾಳ್ಯದ ಮಮತ.ಹೆಚ್.ಜಿ(೩೭) ಆಸ್ಟಿಂಗ್ ಟೌನ್ ನ ಪ್ರಿಯಾ.ಎಸ್(೪೮) ದೊಡ್ಡಗುಬ್ಬಿ ಪೋಸ್ಟ್ ನ ಕಾಡಾಗ್ರಹಾರದ ಯೋಗಬಾಲು(೨೪) ರಾಜಾಜಿನಗರದ ೬ ನೇ ಬ್ಲಾಕ್ ನ ಮೊಹಮ್ಮದ್ ಆಸಿಫ್( ೨೭) ಬಂಧಿತ ಆರೋಪಿಗಳಾಗಿದ್ದಾರೆ.


ಬಂಧಿತರಿಂದ ೮೦ ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ ಏಳು ಮೊಬೈಲ್ ಫೋನ್‌ಗಳು, ಒಂದು ಕಾರು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಮಿಥುನ್ ಕುಮಾರ್ ಜಿ.ಕೆ.ತಿಳಿಸಿದ್ದಾರೆ.


೫ ಲಕ್ಷಕ್ಕೆ ಬೇಡಿಕೆ:
ವಿದ್ಯಾರಣ್ಯಪುರದ ಸಾಯಿನಗರದ ವಾಸಿಯೊಬ್ಬರು ನಂಜಪ್ಪ ಲೇಔಟ್‌ನ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ನಡೆಸುತ್ತಿದ್ದ ಸ್ಪಾ ಮತ್ತು ಸಲೂನ್ ಗೆಕಳೆದ ಅ ೩ರ ರಾತ್ರಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ ಆರು ಮಂದಿ ಸ್ಪಾಗೆ ತೆರಳಿದ್ದರು.


ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ, ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಹಲ್ಲೆ ನಡೆಸಿ. ಅಲ್ಲದೆ, ಸ್ಪಾದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ, ಮಾಲೀಕರ ಬಳಿ ೫ ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಅದರಲ್ಲಿ೧ ಲಕ್ಷ ಹಣವನ್ನು ಪಡೆದುಕೊಂಡು ಹೋಗಿದ್ದರು.


ಕೆಆರ್ ವೃತ್ತದ ಬಳಿ ಸೆರೆ:
ಈ ಸಂಬಂಧ ಮರುದಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ನೀಡಿದ್ದ ದೂರು ಆಧರಿಸಿ ದಾಖಲಿಸಿದ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಮುಂದುವರಿಸಿದ ಪೊಲೀಸರು, ಮಾಹಿತಿ ಸಂಗ್ರಹಿಸಿ ಅಕ್ಟೋಬರ್ ೬ರಂದು ಕೆ.ಆರ್ ವೃತ್ತದ ಬಳಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ನಡೆಸಿದ ವಿಚಾರಣೆಯಲ್ಲಿ ಆರೋಪಿಗಳು ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.


ಆರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್ ಕೆ.ಆರ್. ಮತ್ತವರ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.