
ಕಲಬುರಗಿ,ಅ.17-ಕೆಪಿಎಸ್ಸಿ ಹಗರಣವನ್ನು ಮುಚ್ಚಿಹಾಕಿ ಲೂಟಿಕೋರರ ಪರ ನಿಲ್ಲಲು ಸರ್ಕಾರ ದಕ್ಷ ಅಧಿಕಾರಿ ಅಲೋಕಕುಮಾರ ಅವರನ್ನು ಎಸ್ಐಟಿಯಿಂದ ಹೋರಗಿಡುವ ಕುತಂತ್ರ ನಡೆಸಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ಕೆಪಿಎಸ್ಸಿ ನೇಮಕಾತಿ ಅಕ್ರಮದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಹಾಗೂ ದಿವ್ಯಾ ಗೋಪಿನಾಥ್ ಅವರ ನೇಮಕ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ವಿಚಾರವಾಗಿ ಅಕ್ಟೋಬರ್ 1ರಂದು ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ, ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅಲೋಕ್ ಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ಬಾಕಿ ಇದೆ ಎಂದು ವಾದ ಮಂಡಿಸಿದ್ದರು. ಈ ವಾದವನ್ನು ಖಂಡಿಸಿ ಅಲೋಕ್ ಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಕ್ಟೋಬರ್ 5 ರಂದು ಸುದೀರ್ಘ ಪತ್ರ ಬರೆದಿರುವ ಅಲೋಕ್ ಕುಮಾರ್ ಅವರು ಕಪಿಲ್ ಸಿಬಲ್ ಅವರು ನೀಡಿದ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ತಮ್ಮ ವಿರುದ್ಧ ಪ್ರಸ್ತುತ ಯಾವುದೇ ಸಿಬಿಐ ತನಿಖೆಯಾಗಲಿ ಅಥವಾ ಇಲಾಖಾ ವಿಚಾರಣೆಯಾಗಲಿ ಬಾಕಿ ಇಲ್ಲ ಎಂದು ಅಧಿಕೃತ ದಾಖಲೆಗಳ ಸಮೇತವಾಗಿ ಸ್ಪಷ್ಟಪಡಿಸಿದ್ದು ಅದಕ್ಕೆ ಉತ್ತರ ಇಲ್ಲವಾಗಿದೆ ಇದೆಲ್ಲವು ಗಮನಿಸಿದರೆ ಕೆಪಿಎಸ್ಸಿ ಹಗರಣವನ್ನು ಸಂಪೂರ್ಣ ಮುಚ್ಚಿ ಹಾಕುವ ಕುತಂತ್ರವಾಗಿದೆ ಹೀಗಾಗಿ ಹೈಕೋಟ್ ನಿರ್ದೇಶನದಂತೆ ಸರ್ಕಾರ ಮುಂದುವರೆಯಲಿ ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಬೆಕು ಎಂದು ಅವರು ಆಗ್ರಹಿಸಿದ್ದಾರೆ.























