
ವಿಜಯಪುರ, ಅ.17: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸಲಾಗುವ ಪಡಿತರ ಧಾನ್ಯಗಳ ಅಕ್ರಮ ಸಾಗಣೆ, ಸಂಗ್ರಹಣೆ ಹಾಗೂ ದುರುಪಯೋಗ ತಡೆಗಟ್ಟಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಜನವರಿಯಿಂದ ಅಕ್ಟೋಬರ್ 2026ರವರೆಗೆ ಜಿಲ್ಲೆಯಲ್ಲಿ ಪಡಿತರ ಧಾನ್ಯಗಳ ಅಕ್ರಮಕ್ಕೆ ಸಂಬಂಧಿಸಿದಂತೆ 45 ಪ್ರಕರಣಗಳನ್ನು ದಾಖಲಿಸಿ, 3,894.13 ಕ್ವಿಂಟಲ್ ಅಕ್ಕಿ ಹಾಗೂ 95.1 ಕ್ವಿಂಟಲ್ ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ 93.91 ಲಕ್ಷ ಹಾಗೂ ಗೋಧಿಯ ಮೌಲ್ಯ 2.42 ಲಕ್ಷ ಎಂದು ಆಹಾರ ಇಲಾಖೆ ತಿಳಿಸಿದೆ. ಅಕ್ರಮ ಸಾಗಣೆ ಹಾಗೂ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಗತ್ಯ ವಸ್ತುಗಳ ಕಾಯ್ದೆ-1955ರಡಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಸಾಗಣೆ ಮತ್ತು ಮಾರಾಟಕ್ಕೆ ಬಳಸುತ್ತಿದ್ದ ಲಾರಿ, ಟ್ರಕ್, ಟಾಟಾ ಏಸ್, ಬಜಾಜ್ ಮ್ಯಾಕ್ಸಿಮೊ ಸೇರಿದಂತೆ ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಅಂದಾಜು ಮೌಲ್ಯ 2.10 ಕೋಟಿ ಎಂದು ತಿಳಿಸಲಾಗಿದೆ.
ಅರ್ಹ ಫಲಾನುಭವಿಗಳಿಗೆ ತಲುಪಬೇಕಾದ ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಸುವುದು, ಸಾಗಣೆ ಮಾಡುವುದು ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಾನೂನುಬಾಹಿರ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪಡಿತರ ಧಾನ್ಯಗಳ ಅಕ್ರಮ ಸಾಗಣೆ ಅಥವಾ ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಕ್ರಮ ತಡೆಗೆ ಸಹಕರಿಸಬೇಕು ಎಂದು ಆಹಾರ ಇಲಾಖೆಯ ಉಪನಿರ್ದೇಶಕ ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.






















