Home ಜಿಲ್ಲೆ ಕಲಬುರಗಿ ಕಲಬುರಗಿ ಬರಪೀಡಿತ ಜಿಲ್ಲೆ ಘೋಷಣೆ ಮಾಡಿ 500 ಕೋಟಿ ಪರಿಹಾರ ಹಣ ನೀಡುವಂತೆ ಸಿರಗಾಪೂರ ಆಗ್ರಹ

ಕಲಬುರಗಿ ಬರಪೀಡಿತ ಜಿಲ್ಲೆ ಘೋಷಣೆ ಮಾಡಿ 500 ಕೋಟಿ ಪರಿಹಾರ ಹಣ ನೀಡುವಂತೆ ಸಿರಗಾಪೂರ ಆಗ್ರಹ

ಕಲಬುರಗಿ,ಜು.11-ಮುಂಗಾರು ಮಳೆ ವೈಫಲ್ಯದಿಂದ ಬೆಳೆ ಬಾರದೆ ರೈತರು ತೊಂದರೆ ಅನುಭವಿಸುವಂತಾಗಿದೆ.ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಕಲಬುರಗಿ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ 500 ಕೋಟಿ ಪರಿಹಾರ ಹಣ ನೀಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕಲಬುರಗಿಗೆ ಆಗಮಿಸಿದ ಸಂದರ್ಭದಲ್ಲಿ ಬರಗಾಲ ಘೋಷಣೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಗಾಲ ಪೀಡಿತ ತಾಲ್ಲೂಕುಗಳು ಎಂದು ಘೋಷಸಿ ಕೂಡಲೇ ಪರಿಹಾರ ನೀಡಬೇಕು.ಕಲಬುರಗಿ ಸೇರಿದಂತೆ ಬರಗಾಲ ಪೀಡಿತ ಪ್ರದೇಶಗಳಲ್ಲಿ ಕೇಂದ್ರದ ತಂಡ ಸಮೀಕ್ಷೆ ನಡೆಸಬೇಕು.ತಕ್ಷಣ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮೊರೆ ಹೋಗದೆ ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡಬೇಕು.ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳಬೇಕು.ಹೆಸರು,ಉದ್ದು, ಎಳ್ಳು, ಸೋಯಾಬಿನ್ ಮುಂತಾದ ಮುಂಗಾರು ಬೆಳೆಗಳು ಮಳೆ ಬಾರದೆ ಹಾಳಾಗಿವೆ.ಇನ್ನು ಹಲವು ಕಡೆ ಬಿತ್ತನೆ ಕಾರ್ಯ ಮಾಡಿಲ್ಲ.ರೈತರು ಇಲ್ಲಿಯವರೆಗೆ ಬೆಳೆಯಿಂದ ಒಂದು ರೂಪಾಯಿ ಕೂಡ ಕಂಡಿಲ್ಲ.ಸಾಲ ಮಾಡಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಸಿದ್ದಾರೆ.ಸಾಲ ಮರು ಪಾವತಿಗೆ ಹಣ ಇಲ್ಲ.ಮಳೆ ಬಂದಿದ್ದರೆ ಈಗಾಗಲೇ ರೈತರ ಕೈಗೆ ಹಣ ಬರುತ್ತಿತ್ತು.ಪರಿಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರದ ಖಜಾನೆ ಖಾಲಿ ಮಾಡುತ್ತಿದ್ದಾರೆ.ಆದರೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಬಲವಾಗಿ ಟೀಕಿಸಿರುವ ಅವರು ಕುಡಿಯುವ ನೀರಿಗಾಗಿ ಎಲ್ಲೇಡೆ ಹಾಹಾಕಾರ ಉಂಟಾಗಿದೆ.ಜನ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಗಾಗಿ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕೆಲವು ಕಡೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಗಳನ್ನು ಖರೀದಿಸಿ ತೊಂದರೆ ಎದುರಿಸುತ್ತಿರುವ ಸರ್ಕಾರ ರೈತರ ಖಾತೆಗೆ ಕೂಡಲೇ ಹಣ ಜಮಾ ಮಾಡಬೇಕು.ಪ್ರಸಕ್ತ ಸಾಲಿನ ಎಲ್ಲಾ ರೈತರ ಬೆಳೆ ಸಾಲ ಬಡ್ಡಿ ಸಮೇತ ಸಂಪೂರ್ಣ ಮನ್ನಾ ಮಾಡಬೇಕು.ಜೋಳ ಹಾಗೂ ಗೋಧಿ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಉಚಿತವಾಗಿ ನೀಡಬೇಕು.ಹಲವಾರು ದಿನಗಳಿಂದ ಉಳಿದಿರುವ ರೈತರಿಗೆ ಕಬ್ಬಿನ ಬಿಲ್ಲು ಪಾವತಿಸಲು ಕಾರ್ಖಾನೆಗಳಿಗೆ ಸೂಚಿಸಬೇಕು.ರೈತರಿಗೆ ಕಿರುಕುಳ ನೀಡುತ್ತಿರುವ ಸಹಕಾರಿ ಬ್ಯಾಂಕ್ ಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.