
ಕಲಬುರಗಿ,ಜು.16:ಭಾರತ ಚುನಾವಣಾ ಆಯೋಗವು ಪ್ರಸ್ತುತ ಕರ್ನಾಟಕದಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ಬಿ.ಎಲ್.ಓ. ಗಳು ಆಗಸ್ಟ್ 8ರ ವರೆಗೆ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಜೊತೆಗೆ ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಡಿಜಿಟೈಸ್ ಕಾರ್ಯ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ ಶರೀಫ್ ತಿಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿಯಂತೆ ಜುಲೈ 29ರ ಬದಲಿಗೆ ಆಗಸ್ಟ್ 8ರ ವರೆಗೆ ಬಿ.ಎಲ್.ಓ.ಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಿ ಸಂಗ್ರಹಣೆ ಮಾಡಿ ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಲಿದ್ದಾರೆ. ಇದೇ ಅವಧಿಯಲ್ಲಿ ಮತಗಟ್ಟೆಗಳ ರೇಷನಲೈಸೇಷನ್ ಕಾರ್ಯ ಸಹ ನಡೆಯಲಿದೆ. ಆಗಸ್ಟ್ 17ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಿ ಸೆಪ್ಟೆಂಬರ್ 16ರ ವರೆಗೆ ಆಕ್ಷೇಪಣೆ ಆಹ್ವಾನಿಸಿ ಅಕ್ಟೋಬರ್ 15 ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ ಕೊನೆಗೆ ಅಕ್ಟೋಬರ್ 19ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಜೂನ್ 30 ರಿಂದ ಜಿಲ್ಲೆಯಲ್ಲಿ ಎಸ್.ಐ.ಆರ್ ಕಾರ್ಯ ನಡೆದಿದ್ದು ಜಿಲ್ಲೆಯಾದ್ಯಂತ ಇದೂವರೆಗೆ ಬಿ.ಎಲ್.ಓ ಗಳು ಮನೆ-ಮನೆಗೆ ಹೋಗಿ ಒಟ್ಟು 23,71,542 ಮತದಾರರ ಪೈಕಿ 23,59,324 ಜನರಿಗೆ ಗಣತಿ ನಮೂನೆ ವಿತರಣೆ ಮಾಡಿದ್ದಾರೆ. ಅಲ್ಲದೆ 8,89,088 ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. ಬಿ.ಎಲ್.ಓ. ಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 9,782 ಜನ ಮತದಾರರು ನಿಧನ ಹೊಂದಿರುವ ಬಗ್ಗೆ, 361 ಮತದಾರರು ವಿಳಾಸದಲ್ಲಿಲದ(ಗೈರು), 9,061 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಹಾಗೂ 2,364 ಮತದಾರರು ಈಗಾಗಲೆ ನೋಂದಣಿಯಾಗಿರುವುದು ವರದಿಯಾಗಿದೆ ಎಂದು ಡಿ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಒಟ್ಟು 2,51,226 ಮತದಾರರಿಗೆ, ಗುಲಬರ್ಗಾ ಗ್ರಾಮೀಣ ಕ್ಷೇತ್ರದಲ್ಲಿನ ಒಟ್ಟು 2,74,878 ಮತದಾರರಿಗೆ ಹಾಗೂ ಆಳಂದ ಕ್ಷೇತ್ರದಲ್ಲಿನ ಒಟ್ಟು 2,55,066 ಮತದಾರರಿಗೆ ಬುಧವಾರದ ಅಂತ್ಯಕ್ಕೆ ಶೇ.100ರಷ್ಟು ಗಣತಿ ನಮೂನೆ ವಿತರಣೆಯಾಗಿದೆ.






























