Home ಜಿಲ್ಲೆ ಕಲಬುರಗಿ ಸಕಲ ಜೀವಾತ್ಮರಿಗೆ ದಾಸೋಹಗೈದವರು ಶರಣಬಸವರು

ಸಕಲ ಜೀವಾತ್ಮರಿಗೆ ದಾಸೋಹಗೈದವರು ಶರಣಬಸವರು

ಕಲಬುರಗಿ:ಮಹಾದಾಸೋಹಿ ಶರಣಬಸವೇಶ್ವರರರು ಸಕಲ ಜೀವಾತ್ಮರಿಗೆ ದಾಸೋಹಗೈದವರು ಆ ಪರಂಪರೆಯನ್ನು ಮುಂದುವರಿಸಿದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ದಾಸೋಹವನ್ನು ಕೇವಲ ಅನ್ನದಾನಕ್ಕೆ ಸೀಮಿತಗೊಳಿಸದೆ, ಶಿಕ್ಷಣ, ಜ್ಞಾನ, ಸೇವೆ ಮತ್ತು ಮಾನವೀಯತೆಯ ವಿಶಾಲ ತತ್ವವಾಗಿ ರೂಪಿಸಿದ ಮಹನೀಯರು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಕಲ್ಯಾಣರಾವ ಜಿ.ಪಾಟೀಲ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ರವಿವಾರ ಶ್ರಾವಣ ಮಾಸದ 40 ದಿನUಳÀ ಉಪನ್ಯಾಸ ಮಾಲಿಕೆಯಲ್ಲಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ದಾಸೋಹ ಧರ್ಮ ಎಂಬ ವಿಷಯದ ಕುರಿತು ಮಾತನಾಡಿದರು.
ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ದೃಷ್ಟಿಯಲ್ಲಿ ದಾಸೋಹವು ಕೇವಲ ಆಹಾರ ನೀಡುವುದಲ್ಲ, ಮನುಷ್ಯನ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಸೇವೆಯನ್ನು ಮಾಡುವುದು ಕೂಡ ದಾಸೋಹವೇ.
ಶರಣಬಸವೇಶ್ವರ ಪರಂಪರೆಯಲ್ಲಿ ಅನ್ನ ದಾಸೋಹಕ್ಕೆ ವಿಶೇಷ ಸ್ಥಾನವಿದೆ. ಹಸಿದವರಿಗೆ ಅನ್ನ ನೀಡುವುದು ಮಾನವೀಯ ಸೇವೆಯ ಅತ್ಯಂತ ಮೂಲಭೂತ ರೂಪ. ಈ ಪರಂಪರೆಯ ಮುಂದುವರಿಕೆಯಾಗಿ ದಾಸೋಹ ಮಹಾಮನೆಯ ಸೇವಾ ಪರಿಕಲ್ಪನೆ ಬೆಳೆದಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಇತಿಹಾಸದಲ್ಲಿಯೂ ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹದ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದೆ.
ಡಾ. ಶರಣಬಸವಪ್ಪ ಅಪ್ಪ ಅವರ ದಾಸೋಹ ಧರ್ಮದ ಅತ್ಯಂತ ಪ್ರಮುಖ ಆಯಾಮವೆಂದರೆ ಶಿಕ್ಷಣ ದಾಸೋಹ. ಅವರ ಚಿಂತನೆಯ ಪ್ರಕಾರ ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ವ್ಯಕ್ತಿಯನ್ನು ಉತ್ತಮ ನಾಗರಿಕನನ್ನಾಗಿ ಮಾಡಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಶಕ್ತಿಯಾಗಿದೆ. ಪೂಜ್ಯರು ಸರ್ವದಲೆ ದಾಸೋಹ ಎಂದವರು. ಇಪ್ಪತ್ತೊಂದು ದಾಸೋಹ ಸೂತ್ರಗಳನ್ನು ರಚಿಸಿ ಸಮಾಜಕ್ಕೆ, ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕೆಲಸ ಮಾಡಿದ್ದಾರೆ.
ಜ್ಞಾನವನ್ನು ತನ್ನಲ್ಲೇ ಇಟ್ಟುಕೊಳ್ಳದೆ ಇತರರಿಗೆ ಹಂಚುವುದು ಜ್ಞಾನ ದಾಸೋಹ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವುದು, ವಿದ್ಯಾರ್ಥಿಗಳು ಪಡೆದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸುವುದು-ಇವೆಲ್ಲವೂ ದಾಸೋಹದ ರೂಪಗಳೆಂದು ಪರಿಗಣಿಸಬಹುದು.
ಒಟ್ಟಿನಲ್ಲಿ, ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ದಾಸೋಹ ಧರ್ಮವು ಅನ್ನ ದಾಸೋಹದಿಂದ ಜ್ಞಾನ ದಾಸೋಹದವರೆಗೆ, ವೈಯಕ್ತಿಕ ಸೇವೆಯಿಂದ ಸಾಮಾಜಿಕ ಪರಿವರ್ತನೆಯವರೆಗೆ ವಿಸ್ತರಿಸಿದ ಮಾನವೀಯ ಜೀವನದರ್ಶನವಾಗಿದೆ.