
ಚಿತ್ರದುರ್ಗ,ಮಾ.೦೧: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಮಾದಿಗ ಸಮಾಜಕ್ಕೆ ಸಿಗಬೇಕಾದ ಸೂಕ್ತ ಸ್ಥಾನಮಾನವನ್ನ ನೀಡಿ ಹುದ್ದೆಗಳನ್ನು ಭರ್ತಿ ಮಾಡಬೇಕು ಇಲ್ಲವಾದಲ್ಲಿ ಪಾದಯಾತ್ರೆಯ ಮೂಲಕ ಮತ್ತೋಮ್ಮೆ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಷಡಾಕ್ಷರಿಮುನಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಚಿತ್ರದುರ್ಗದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮಾಜ ಒಳಮೀಸಲಾತಿಗಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದರ ಫಲವಾಗಿ ಇಂದು ಸರ್ಕಾರ ಅನುಷ್ಟಾನ ಮಾಡುವ ಹಂಚಿಗೆ ಬಂದಿರುವುದು ಸರಿಯಷ್ಟೆ. ಆದರೆ ಹುದ್ದೆಗಳನ್ನು ಭರ್ತಿ ಮಾಡುವಾಗ ಪರಿಶಿಷ್ಟರ ಮೀಸಲಾತಿ ಕಡಿತಗೊಳಿಸದೇ ನೇಮಕಾತಿ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಶ್ರೀ ಬಸವ ಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಖಾಲಿ ಉಳಿದಿದ್ದ ೨.೮೪ ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಂತೆ ನಿರುದ್ಯೋಗಿ ಯುವಜನರು ಇತ್ತೀಚೆಗೆ ನಡೆಸಿದ ಹೋರಾಟಗಳಿಗೆ ಸ್ಪಂಧಿಸಿರುವ ಸರ್ಕಾರವು ೫೬,೪೩೨ ಹುದ್ದೆಗಳಿಗೆ ನೇಮಕಾತಿ ಮಾಡಲು ನಿರ್ಣಯಿಸಿರುವುದನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ನೇಮಕಾತಿ ತಡಮಾಡಿದರೆ ಅನೇಕ ವಿದ್ಯಾರ್ಥಿಗಳು ಅರ್ಹತೆ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದಾಗಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಹಳೆಯ ಮೀಸಲಾತಿ ನಿಯಮದ ಪ್ರಕಾರ ಮೀಸಲಾತಿಯ ಪ್ರಮಾಣವು ಒಟ್ಟು ಶೇ. ೧೮ ಅನ್ನು ಮೀರದಿರುವಂತೆ ನ್ಯಾಯಾಲಯವು ನೀಡಿರುವ ನಿರ್ದೇಶನದ ಅನುಸಾರ ಪರಿಶಿಷ್ಟ ಜಾತಿಗೆ ಶೇ. ೧೫. ಪರಿಶಿಷ್ಟ ಪಂಗಡಕ್ಕೆ ಶೇ. ೩ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ೩೨ ರ ಅನುಪಾತದಲ್ಲಿ ಮೀಸಲಾತಿ ನೀಡುವುದು ಅನಿವಾರ್ಯವಾಗಿದೆ. ಅದೇ ರೀತಿ, ೨೦೨೨ ರಲ್ಲಿ ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟ ಪಂಗಡಕ್ಕೆ ಹೆಚ್ಚುವರಿಯಾಗಿ ಘೋಷಿಸಲಾಗಿದ್ದ ಶೇ ೬ ರಷ್ಟು (ಪ.ಜಾ ೨, ಪ.ಪಂ ೪) ಮೀಸಲಾತಿಯನ್ನು ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.
ಅಂಧ್ರ ಮತ್ತು ತೆಲಾಂಗಣ ರಾಜ್ಯದಲ್ಲಿ ಎಲ್ಲಾ ಸಮಾಜದವರು ಸಮಾನತೆಯಿಂದ ನಡೆದುಕೊಂಡು ಹೋಗುವಂತೆ ಹುದ್ದೆಗಳ ನೇಮಕಾತಿ ಮಾಡಿದ್ದಾರೆ. ಅದೇ ರೀತಿ ನಮ ರಾಜ್ಯದಲ್ಲೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧ ಪಟ್ಟ ಎಲ್ಲಾ ಸಚಿವರು, ಅಧಿಕಾರಿ ಹಾಗೂ ಸಮಾಜದವರ ಸಭೆ ಕರೆದು ಯಾರಿಗೂ ಕೂಡ ಅನ್ಯಾಯ ಆಗದಂತೆ ಹುದ್ದೆಗಳ ನೇಮಕಾತಿ ಮಾಡುತ್ತೇವೆ ಎಂದು ಭರವಸೆ ನೀಡಬೇಕು. ಇಲ್ಲವಾದರೆ ಮತ್ತೇ ಹೋರಾಟಕ್ಕೆ ಮುಂದಾಗುವ ತೀರ್ಮಾನಕ್ಕೆ ಬರಲಾಗುವುದು. ಇದಕ್ಕೆ ಪೂರಕವಾಗಿ ಶ್ರೀ ಷಡಾಕ್ಷರಿ ಮುನಿ ಸ್ವಾಮೀಜಿಗಳು ತಿಳಿಸಿರುವಂತೆ ಪಾದಯಾತ್ರೆಯ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

























