
ವಿಜಯಪುರ.ಮಾ೧: ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವೆನಿಸಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಶನಿವಾರದಿಂದ ಪಟ್ಟಣದಲ್ಲಿ ಅತ್ಯಂತ ಶಿಸ್ತುಬದ್ಧ ಹಾಗೂ ಶಾಂತಿಯುತವಾಗಿ ಆರಂಭಗೊಂಡವು. ಮೊದಲ ದಿನ ನಡೆದ ಕನ್ನಡ ವಿಷಯದ ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಹಾಜರಾಗಿದ್ದರು.
ಪಟ್ಟಣದ ಪ್ರಮುಖ ಎರಡು ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರಗತಿ ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ಜರುಗಿದವು.ಪಟ್ಟಣದ ವಿವಿಧ ಕಾಲೇಜುಗಳ ಒಟ್ಟು ೫೭೪ ವಿದ್ಯಾರ್ಥಿಗಳು ಮೊದಲ ದಿನ ಪರೀಕ್ಷೆಗೆ ಹಾಜರಾಗಿದ್ದರು. ವಿಶೇಷವೆಂದರೆ, ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿದ ಅಥವಾ ’ಡಿಬಾರ್ ಆದ ಪ್ರಕರಣಗಳು ವರದಿಯಾಗಿಲ್ಲ.
ಪ್ರಗತಿ ಬಾಲಕಿಯರ ಪಿಯು ಕಾಲೇಜು:
ಈ ಕೇಂದ್ರದಲ್ಲಿ ಸರ್ಕಾರಿ ಪಿಯು ಕಾಲೇಜು, ವಿಜಯ, ಇನ್ಸಸ್ಫೈರ್, ಜ್ಙಾನಗಂಗಾ, ನಂದಿನಿ ಕಾಲೇಜುಗಳ ಒಟ್ಟು ೨೬೫ ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಈ ಪೈಕಿ ೮ ವಿದ್ಯಾರ್ಥಿಗಳು ಗೈರುಹಾಜರಾಗಿದ್ದು, ಉಳಿದ ೨೫೭ ಮಂದಿ ಪರೀಕ್ಷೆ ಬರೆದಿದ್ದು ಕೇಂದ್ರದ ಅಧೀಕ್ಷಕರಾಗಿ ಶಿವಶಂಕರ್ ಕಾರ್ಯ ನಿರ್ವಹಿಸಿದರು.
ಸರ್ಕಾರಿ ಪಿಯು ಕಾಲೇಜು: ಇಲ್ಲಿ ಪ್ರಗತಿ ಬಾಲಕಿಯರ ಹಾಗೂ ಪ್ರಗತಿ ಸಂಯುಕ್ತ ಪಿಯು ಕಾಲೇಜುಗಳ ಒಟ್ಟು ೩೧೮ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಕೇವಲ ಓರ್ವ ವಿದ್ಯಾರ್ಥಿ ಗೈರಾಗಿದ್ದಾನೆ. ಒಟ್ಟು ೩೧೭ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ ಕೇಂದ್ರದ ಅಧೀಕ್ಷಕರಾಗಿ ಬೈರೇಗೌಡ ಕಾರ್ಯ ನಿರ್ವಹಿಸಿದರು.
ಬೆಳಿಗ್ಗೆಯಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಆಗಮಿಸಿದ್ದರು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪೋಷಕರು ಮತ್ತು ಸಾರ್ವಜನಿಕರ ಓಡಾಟವನ್ನು ನಿಬಂಧಿಸಲಾಗಿತ್ತು.
ಪರೀಕ್ಷಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ ಉತ್ತರ ಪತ್ರಿಕೆಗಳ ಪಾಲಕ ಮುನಿರಾಜು ಅವರು, “ಎರಡೂ ಕೇಂದ್ರಗಳಲ್ಲಿ ಪರೀಕ್ಷೆಗಳು ಅತ್ಯಂತ ವ್ಯವಸ್ಥಿತವಾಗಿ ನಡೆದಿವೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ, ಸಂಪೂರ್ಣ ಶಾಂತಿಯುತವಾಗಿ ಮೊದಲ ದಿನದ ಪರೀಕ್ಷೆ ಮುಕ್ತಾಯಗೊಂಡಿದೆ,” ಎಂದು ತಿಳಿಸಿದರು.
ಒಟ್ಟಾರೆಯಾಗಿ, ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ಪಟ್ಟಣದಲ್ಲಿ ಯಾವುದೇ ಗೊಂದಲವಿಲ್ಲದೆ ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ನಿರಾಳವಾಗಿ ಮನೆಗೆ ಮರಳಿದರು.
























