
ಕಲಬುರಗಿ,ಏ.16-ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೊಕ್ಸೋ) ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ರೂ.ದಂಡ ವಿಧಿಸಿದೆ.
ನಾಗೇಶ ಅಲಿಯಾಸ್ ಸಂಜು ತಂದೆ ಲಾಲಸಾಬ ಬಂದರವಾಡ ಅಲಿಯಾಸ್ ಕೋಲೆಕರ್ (23) ಶಿಕ್ಷೆಗೆ ಗುರಿಯಾದ ಆರೋಪಿ.
2024ರಲ್ಲಿ ಆರೋಪಿ ಬಾಲಕಿಗೆ ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಬಗ್ಗೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ರಾಜೇಸಹೇಬ್ ನದಾಫ್ ಅವರು ತನಿಖೆ ನಡೆಸಿ ಪೊಕ್ಸೋ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೊಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಸಿ.ಜಿ.ಅವರು ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕಾನೂನು ಪ್ರಾಧಿಕಾರದ ವತಿಯಿಂದ ತೀರ್ಪಿನ ದಿನಾಂಕದಿಂದ 1 ತಿಂಗಳ ಅವಧಿಯೊಳಗೆ ನೊಂದ ಬಾಲಕಿಗೆ 3 ಲಕ್ಷ ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.






















