
ವಿಜಯಪುರ,ಮಾ೧: “ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿಯುತ ನಡವಳಿಕೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಅಗತ್ಯ,” ಎಂದು ಪ್ರಗತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ. ಸತೀಶ್ ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಗತಿ ಪ್ರಾಥಮಿಕ ಆಂಗ್ಲ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ’ವಿಜ್ಞಾನ ವಸ್ತು ಪ್ರದರ್ಶನ ಮೇಳ’ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರಿಗಾಗಿ ಆಯೋಜಿಸಿದ್ದ ’ಕ್ರೀಡಾಕೂಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಕುಮಾರ್ ಅವರು, “ಮಕ್ಕಳಿಗೆ ಕೇವಲ ಪಠ್ಯದ ಪಾಠ ಮಾತ್ರವಲ್ಲದೆ, ಸಾಮಾನ್ಯ ಜ್ಞಾನ ಮತ್ತು ವಿಜ್ಞಾನದ ಅರಿವು ಇರುವುದು ಇಂದಿನ ಕಾಲದ ಅನಿವಾರ್ಯತೆ. ಶಾಲೆಯಲ್ಲಿ ಕಲಿತದ್ದನ್ನು ಪ್ರಾಯೋಗಿಕವಾಗಿ ತೋರ್ಪಡಿಸಲು ಇಂತಹ ಮೇಳಗಳು ಸಹಕಾರಿ. ನಮಗೆ ತಿಳಿಯದ ಎಷ್ಟೋ ವಿಷಯಗಳನ್ನು ಮಕ್ಕಳು ಇಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸುತ್ತಿರುವುದು ಸಂತಸದ ಸಂಗತಿ. ಪೋಷಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರ ಜೊತೆಗೆ ಶಾಲಾ ಆಡಳಿತ ಮಂಡಳಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು,” ಎಂದರು.
ಗುರುಗಳ ಪಾತ್ರ ಮಹತ್ತರ;ಮುಖ್ಯಶಿಕ್ಷಕ ಪ್ರಕಾಶ್ ಮಾತನಾಡಿ, “ತಂದೆ-ತಾಯಿ ಜನ್ಮ ನೀಡಿದರೆ, ಗುರುಗಳು ಜೀವನದ ದಾರಿಯನ್ನು ತೋರಿಸುತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯಗಳು ಲಭ್ಯವಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು,” ಎಂದು ಕರೆ ನೀಡಿದರು.
ವಿಜ್ಞಾನ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಈ ಮೇಳದಲ್ಲಿ ನೂರಾರು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು ಜನರ ಗಮನ ಸೆಳೆದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
ಜಿಯೋ ಸ್ಟೇಷನರಿ ಸ್ಯಾಟಲೈಟ್: ಮಹಮ್ಮದ್ ತಾಹಿರ್ ಮತ್ತು ಅನಿತ್ ಗೌಡ.ಗ್ಲೋಬಲ್ ವಾಮಿಂಗ್: ಚೇತನ್ ಮತ್ತು ಮೇಘನಾ.
ಹೈಡ್ರಾಲಿಕ್ ಮಿಸೈಲ್ ಲಾಂಚರ್: ತೇಜಸ್ ಮತ್ತು ಯಶ್ವಂತ್.ರೈನ್ ಡಿಟೆಕ್ಟರ್: ಕೃತಿಕಾ.ಇತರ ಮಾದರಿಗಳು: ಕೀರ್ತನಾ, ಲಿಖಿತಾ, ಹರ್ಷಿತಾ ಮತ್ತು ಪೂಜಾ ತಂಡದ ಪ್ರಯೋಗಗಳು.
ಮಾಡ್ರನ್ ಸಿಟಿ: ಸಾತ್ವಿಕಾ.ಪೈಥರಸ್ ಪ್ರಾಪರ್ಟಿ: ಮಹಮದ್ ಅಬ್ಬಾಸ್ ಮತ್ತು ಜೇಷ್ಠ.ಮಲ್ಟಿಪಲ್ ಇಮೇಜಸ್: ನಿಸರ್ಗ ಮತ್ತು ಗಾನವಿ.
ಗಣಿತ ಆಧಾರಿತ ಪ್ರಯೋಗಗಳು: ಯಶಸ್ವಿ (ಡಿಜಿಟ್ ಸಮ್ ಆಕ್ಟಿವಿಟಿ), ಚೈತ್ರ ಮತ್ತು ಚೈತನ್ಯ (ಜಿಯೋ ಮೆಟ್ರಿಕಲ್ ಪಾರ್ಕ್).
ಇದಲ್ಲದೆ ಮ್ಯಾಥಮೆಟಿಕ್ಸ್ ಪಾರ್ಕ್, ಮೆಜಮೆಂಟಲ್ ಪಾರ್ಕ್ ಹಾಗೂ ಡಿಜಿಟಲ್ ಫೋಟೋ-ವಿಡಿಯೋ ಹೊಂದಿರುವ ದ್ರೋಣ್ ಮಾದರಿಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.
ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದರು.
























