
ಜಮಖಂಡಿ, ಜೂ 2: ಬಾಲಿಕೆಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಸಂಭ್ರಮ ಹಾಗೂ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.
ಶಾಲಾ ಆವರಣವನ್ನು ಬಣ್ಣ ಬಣ್ಣದ ರಂಗೋಲಿ, ಸ್ವಾಗತ ಬರಹಗಳು ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿನಿಯರು “ವಿದ್ಯಾ ಜ್ಯೋತಿ ನಡಿಗೆ – ಶಾಲೆಯ ಕಡೆಗೆ” ಎಂಬ ಘೋಷಣೆಯೊಂದಿಗೆ ವಿದ್ಯಾ ಜ್ಯೋತಿ ಪಂಜಿನ ಮೆರವಣಿಗೆ ನಡೆಸಿದರು. ನಗರದ ಬಸ್ ನಿಲ್ದಾಣ, ದೇಸಾಯಿ ಸರ್ಕಲ್, ನಗರಸಭೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಶಿಕ್ಷಣದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಬಳಿಕ ಶಾಲೆಗೆ ಆಗಮಿಸಿ ವಿದ್ಯಾ ಜ್ಯೋತಿಯನ್ನು ಸಮರ್ಪಿಸಿದರು.
“ನನ್ನ ಕನಸಿನ ರೆಕ್ಕೆಗಳು” ಎಂಬ ವಿನೂತನ ಕಾರ್ಯಕ್ರಮದಡಿ ವಿದ್ಯಾರ್ಥಿನಿಯರು ತಮ್ಮ ಭವಿಷ್ಯದ ಕನಸುಗಳು ಹಾಗೂ ಗುರಿಗಳನ್ನು ಬರೆದು “ನನ್ನ ಕನಸಿನ ಗೋಡೆ”ಗೆ ಅಂಟಿಸುವ ಮೂಲಕ ಜೀವನದ ಗುರಿಗಳತ್ತ ದೃಢ ಸಂಕಲ್ಪ ವ್ಯಕ್ತಪಡಿಸಿದರು.
ಶಾಲೆಗೆ ಆಗಮಿಸಿದ ವಿದ್ಯಾರ್ಥಿನಿಯರನ್ನು ಪುಷ್ಪವೃಷ್ಟಿ ಮಾಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಎಸ್‍ಡಿಎಂಸಿ ಸದಸ್ಯರು ಬ್ಯಾಡ್ಜ್‍ಗಳನ್ನು ನೀಡಿ ಗೌರವಿಸಿದರು. ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುವ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು.
ಶಾಲಾ ಪ್ರಾರಂಭೋತ್ಸವ ಸಮಾರಂಭ ಹಾಗೂ ಪಾಲಕ-ಶಿಕ್ಷಕರ ಮೇಗಾ ಸಭೆಯನ್ನು ಸರಸ್ವತಿ ಪೂಜೆಯೊಂದಿಗೆ ಆರಂಭಿಸಲಾಯಿತು. ನಂತರ ಎಲ್ಲ ವಿದ್ಯಾರ್ಥಿನಿಯರಿಗೂ ಸಿಹಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಡಿಎಂಸಿ ಸದಸ್ಯ ಮೋಹನ್ ಸಬರದ, ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿ.ಜಿ. ಹೈಸ್ಕೂಲ್ ಶೇ.99.22 ಫಲಿತಾಂಶ ಸಾಧಿಸಿದ್ದು, ಆಂಗ್ಲ ಮಾಧ್ಯಮ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿರುವುದು ಶಾಲೆಯ ಇತಿಹಾಸದಲ್ಲೇ ದಾಖಲೆಯ ಸಾಧನೆಯಾಗಿದೆ ಎಂದು ತಿಳಿಸಿದರು. ಈ ಯಶಸ್ಸಿನ ಹಿಂದೆ ಶಿಕ್ಷಕರ ಪರಿಶ್ರಮ ಪ್ರಮುಖವಾಗಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಪ್ರಾಂಶುಪಾಲ ಮಹಾಂತೇಶ ನರಸನಗೌಡ್ರ, ಶಾಲೆಯು ಉತ್ತಮ ಶೈಕ್ಷಣಿಕ ಗುಣಮಟ್ಟ, ಅಗತ್ಯ ಮೂಲಸೌಕರ್ಯ, ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ಹಾಗೂ ಶಿಸ್ತಿನ ಶಿಕ್ಷಣವನ್ನು ಒದಗಿಸುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ನಂದು ಕನಕೇರಿ, ಸದಸ್ಯರಾದ ಮೋಹನ್ ಸಬರದ, ಸುಕನ್ಯಾ ಜಂಬಗಿ ಹಾಗೂ ಮಹಾದೇವಿ ಕಾರಬಾರಿ ಉಪಸ್ಥಿತರಿದ್ದರು.
ಶಿಕ್ಷಕರಾದ ಎಂ.ಎಸ್. ಮೆಂಡಿಗೇರಿ, ರಮೇಶ ವಡ್ಡರ, ಮಹಾಲಿಂಗ ಹುದ್ದಾರ, ಗೀತಾ ಕಲೂತಿ, ಭಾಗ್ಯ ಉಪ್ಪಿನ, ಅನ್ನಪೂರ್ಣ ಬಾಗಿ, ರಮೇಶ ದಾನಗೌಡ, ಅಶೋಕ ಹಾಜವ್ವಗೋಳ ಸೇರಿದಂತೆ ಶಿಕ್ಷಕ ವೃಂದ ಭಾಗವಹಿಸಿದ್ದರು.
ಅಪೆÇ್ರೀಜ ಚಂದಾವಾಲೆ ಸ್ವಾಗತಿಸಿದರು. ಸವಿತಾ ಪುಣೇಕರ ವಂದಿಸಿದರು. ಮಹಾಂತೇಶ ಸಜ್ಜನ ಕಾರ್ಯಕ್ರಮ ನಿರೂಪಿಸಿದರು.
ಒಟ್ಟಿನಲ್ಲಿ ಶಾಲಾ ಪ್ರಾರಂಭೋತ್ಸವವು ಮಕ್ಕಳ ಕಲರವ, ಉತ್ಸಾಹ, ಹೊಸ ಕನಸುಗಳು ಮತ್ತು ಶಿಕ್ಷಣದ ಮಹತ್ವದ ಸಂದೇಶದೊಂದಿಗೆ ಹಬ್ಬದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.


























