Home ಜಿಲ್ಲೆ ಕಲಬುರಗಿ ಸಂಪೂರ್ಣವಾಗಿ ಹಾಳಾಗಿ ಹೋದ ಚೌಡಾಪೂರ ಗ್ರಾಮದ ಶುಕ್ರವಾರದ ಸಂತೆ ಕಟ್ಟೆ ರಸ್ತೆ: ಗ್ರಾಮಸ್ಥರ ಆಕ್ರೋಶ

ಸಂಪೂರ್ಣವಾಗಿ ಹಾಳಾಗಿ ಹೋದ ಚೌಡಾಪೂರ ಗ್ರಾಮದ ಶುಕ್ರವಾರದ ಸಂತೆ ಕಟ್ಟೆ ರಸ್ತೆ: ಗ್ರಾಮಸ್ಥರ ಆಕ್ರೋಶ

ಅಫಜಲಪುರ,ಸೆ.11-ತಾಲೂಕಿನ ಚೌಡಾಪೂರ ಗ್ರಾಮದ ಪ್ರಮುಖ ಶುಕ್ರವಾರದ ಸಂತೆ ಕಟ್ಟೆ ಹಾಗೂ ಒಳ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು, ಚರಂಡಿ ಮಯವಾಗಿವೆ ಎಂದು ಸಂತೆ ಕಟ್ಟೆ ಬಡಾವಣೆಯ ನಿವಾಸಿಗಳು ಹಾಗೂ ಚೌಡಾಪೂರ ಗ್ರಾಮದ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಹಾಳಾಗಿರುವುದರಿಂದ ದೈನಂದಿನ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆಗಳು ಕೆಸರು ಗದ್ದೆಯಾಗಿ ಮಾರ್ಪಟ್ಟು ವಾಹನ ಸಂಚಾರಕ್ಕೂ, ಕಾಲ್ನಡಿಗೆಗೂ ತೀವ್ರ ತೊಂದರೆ ಉಂಟಾಗಿದೆ. ಬೇಸಿಗೆ ಸಮಯದಲ್ಲಿ ಧೂಳಿನಿಂದ ಕೂಡಿರುತ್ತದೆ. ಮಳೆ ಬಂದ ಸಮಯದಲ್ಲಿ “ರಸ್ತೆ ಇದೆಯೋ, ಚರಂಡಿ ಇದೆಯೋ ? ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡುವಂತಾಗಿದೆ. ಈ ವಿಷಯವನ್ನು ಗ್ರಾಮ ಪಂಚಾಯತಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ಮಾಡಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸದಿದ್ದರೆ ಗ್ರಾಮಸ್ಥರು ಸಂಘಟಿತವಾಗಿ ಹೋರಾಟ ನಡೆಸುವುದಾಗಿ ಹಾಗೂ ಪ್ರತಿಭಟನೆಗೆ ಇಳಿಯುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಾ. ಕಿರಣ ಕುಮಾರ ಸಣ್ಣೂರ, ಸುಭಾಸ್ ಪಾಟೀಲ್, ಹಣಮಂತರಾಯ ಭಜಂತ್ರಿ ಹಾಗೂ ರಮೇಶ ಎಂ ಜಮಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.