Home ಜಿಲ್ಲೆ ಪೌಷ್ಠಿಕ ಆಹಾರದಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕರೆ

ಪೌಷ್ಠಿಕ ಆಹಾರದಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕರೆ


ಗದಗ,ಸೆ.೧೧: ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ದೈನಂದಿನ ಆಹಾರದಲ್ಲಿ ಅಗತ್ಯ ಪೌಷ್ಠಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡರ ಹೇಳಿದರು.


ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಗದಗ ತಾಲೂಕಿನ ಲಕ್ಕುಂಡಿಯ ಶ್ರೀ ಅನ್ನದಾನೇಶ್ವರ ಮಠದ ಸಭಾಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಅತ್ಯಂತ ಪ್ರಮುಖವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರಾಧಾ ಜಿ. ಮಣ್ಣೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತಿರುವ ಪೋಷಣ ಮಾಸಾಚರಣೆಯನ್ನು ?ಹಮಾರಿ ಅಂಗನವಾಡಿ ಹಮಾರಿ ಜಿಮ್ಮೆದಾರಿ? (ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ) ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅಂಗನವಾಡಿಗಳ ಜವಾಬ್ದಾರಿ ಕೇವಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀಮಿತವಾಗಿರದೆ, ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.


ಗರ್ಭಿಣಿಯರು, ಬಾಣಂತಿಯರು, ೦ ರಿಂದ ೬ ವರ್ಷದೊಳಗಿನ ಮಕ್ಕಳು ಹಾಗೂ ಕಿಶೋರಿಯರ ಆರೋಗ್ಯ ಮತ್ತು ಪೌಷ್ಠಿಕತೆ ಸುಧಾರಣೆಯಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಕಾರ್ಯದಲ್ಲಿ ಆರೋಗ್ಯ ಇಲಾಖೆ ಹಾಗೂ ಆಯುಷ್ ಇಲಾಖೆಯ ಸಹಕಾರವೂ ಮಹತ್ವದ್ದಾಗಿದೆ ಎಂದು ಹೇಳಿದರು.


ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆ, ಶಾಲಾ ಪೂರ್ವ ಶಿಕ್ಷಣದ ಆಧಾರಶಿಲಾ ಮತ್ತು ನವಚೇತನ ಮಾದರಿಗಳು ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸೌಲಭ್ಯಗಳ ಕುರಿತು ಅವರು ಮಾಹಿತಿ ನೀಡಿದರು. ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ ಪಾಲಕರು ವಿಶೇಷ ಗಮನಹರಿಸಬೇಕು ಎಂದು ಸಲಹೆ ನೀಡಿದರು.


ಜಿಲ್ಲಾ ಆಯುಷ್ ಅಧಿಕಾರಿ ಜುಬೇದಾ ಟಿಗಳೇರ ಅವರು ಮಾತನಾಡಿ, ಮಾನವನ ಹುಟ್ಟಿನಿಂದ ಜೀವನದ ವಿವಿಧ ಹಂತಗಳವರೆಗೆ ಆರೋಗ್ಯ ಸಂರಕ್ಷಣೆಯಲ್ಲಿ ಆಯುರ್ವೇದದ ಮಹತ್ವವನ್ನು ವಿವರಿಸಿದರು.
ಗ್ರಾಮ ಪಂಚಾಯತ್ ಲಕ್ಕುಂಡಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರನಾಯಕ ಅವರು ನೀರು, ನೈರ್ಮಲ್ಯ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯವನ್ನು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಯ ಸೌಲಭ್ಯಗಳನ್ನು ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.
ಪೋಷಣ ಮಾಸಾಚರಣೆಯ ಅಂಗವಾಗಿ ಕಾರ್ಯಕ್ರಮದಲ್ಲಿ ಗರ್ಭಿಣಿಯರ ಸೀಮಂತ ಕಾರ್ಯಕ್ರಮ, ಪೌಷ್ಠಿಕ ಆಹಾರದ ಪ್ರಾತ್ಯಕ್ಷಿಕೆ, ಅನ್ನಪ್ರಾಶನ, ಪೋಷಣ ಅಭಿಯಾನ ಮಾಹಿತಿ ಕೇಂದ್ರದ ಪ್ರದರ್ಶನ, ರಾಷ್ಟಿçÃಯ ಪೋಷಣ ಮಾಸಾಚರಣೆ ಉದ್ಘಾಟನಾ ಕಾರ್ಯಕ್ರಮದ ವೆಬ್‌ಕಾಸ್ಟ್ ವೀಕ್ಷಣೆ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು.


ಇದರೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಮಕ್ಕಳು ತರಕಾರಿ ಮತ್ತು ಹಣ್ಣುಗಳ ವೇಷಭೂಷಣ ಧರಿಸಿ ಪೌಷ್ಠಿಕ ಆಹಾರದ ಮಹತ್ವವನ್ನು ಸಾರುವ ವಿಶೇಷ ಪ್ರದರ್ಶನ ನೀಡಿದರು.


ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಶ್ರೀಮತಿ ಜಯಶ್ರೀ ಆರ್, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಶ್ರೀಮತಿ ನಿವೇದಿತಾ ಬಡಿಗೇರ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶ್ರೀಮತಿ ಮಂಜುಳಾ ಕಮತ್ ಮತ್ತು ಶ್ರೀಮತಿ ರೇಣುಕಾ ಮಾಗಡಿ, -ಲಕ್ಕುಂಡಿ ವಲಯದ ಮೇಲ್ವಿಚಾರಕರು ಶ್ರೀಮತಿ ಶಾಹಿದಾಬೇಗಂ ಹತ್ತಿವಾಲೆ, ಪೋಷಣ ಜಿಲ್ಲಾ ಸಂಯೋಜಕರು ಕು. ಸಂಗೀತಾ ಹೂಗಾರ, ಮಾತೃವಂದನಾ ಜಿಲ್ಲಾ ಸಂಯೋಜಕರು ಶ್ರೀಮತಿ ನೇತ್ರಾ ಹರ್ತಿ ಹಾಗೂ ಪೋಷಣ ಜಿಲ್ಲಾ ಸಹಾಯಕರು ಕು. ಪವನ ಕಾಟೀಗರ, ಪೋಷಣ ತಾಲೂಕು ಸಂಯೋಜಕರು ಶ್ರೀಮತಿ ಕಾವೇರಿ ಚೇಗೂರ, ಹಿರಿಯ ಮೇಲ್ವಿಚಾರಕಿಯರು, ಎಲ್ಲಾ ವಲಯ ಮೇಲ್ವೀಚಾರಕಿಯರು, ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರು, ಸಾರ್ವಜನಿಕರು, ಗರ್ಭಿಣಿ, ಬಾಣಂತಿಯರು ಹಾಗೂ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಜಿಲ್ಲಾ ನಿರೂಪಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಜುಳಾ ಬೂದಪ್ಪನವರ ಕಾರ್ಯಕ್ರಮ ನಿರೂಪಿಸಿದರು. ವಿನೋದಾ ಹೊಂಬಳ ವಂದನಾರ್ಪಣೆ ಸಲ್ಲಿಸಿದರು.