Home ಮುಖಪುಟ ಸುದ್ದಿ ಸರ್ಕಾರದಿಂದ ರಿಯಲ್ ಎಸ್ಟೇಟ್ ದಂಧೆ

ಸರ್ಕಾರದಿಂದ ರಿಯಲ್ ಎಸ್ಟೇಟ್ ದಂಧೆ

ಬೆಂಗಳೂರು, ಮೇ.೧೪-ಬಿಡದಿ ಭಾಗದ ಎಂಟು ಗ್ರಾಮಗಳನ್ನು ಒಳಗೊಂಡ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಫಲವತ್ತಾದ ಭೂಮಿಯನ್ನು ಕಬಳಿಸಿ ಸರ್ಕಾರ ಅಧಿಕೃತವಾಗಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದೆ ಎಂದು ಆರೋಪಿಸಿದರು.


ಬಿಡದಿ, ಬೈಲಮಂಗಲ, ಹೊಸೂರು, ತೆಂಚಗಾರನಹಳ್ಳಿ ಸೇರಿದಂತೆ ಎಂಟು ಗ್ರಾಮಗಳನ್ನು ಒಳಗೊಂಡ ಯೋಜನೆಯನ್ನು ಸರ್ಕಾರ ಹೊಸದಾಗಿ ಘೋಷಿಸಿದಂತಿದೆ. ಆದರೆ ಈ ಯೋಜನೆಯ ಮೂಲ ಪರಿಕಲ್ಪನೆ ತಮ್ಮ ಆಡಳಿತಾವಧಿಯಲ್ಲೇ ರೂಪಿತವಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು. “ನಾನು ೨೦೦೬ರಲ್ಲೇ ಐದು ಟೌನ್‌ಶಿಪ್ ನಿರ್ಮಾಣದ ನಿರ್ಧಾರ ಕೈಗೊಂಡಿದ್ದೆ. ಬೆಂಗಳೂರಿನ ಭವಿಷ್ಯದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸಕೋಟೆ, ಸೋಲೂರು ಹಾಗೂ ಸಾತನೂರು ಭಾಗಗಳಲ್ಲಿ ಪ್ರಕ್ರಿಯೆ ಆರಂಭಿಸಿದ್ದೆ,” ಎಂದರು.


ಈಗಿನ ಸರ್ಕಾರ ರೈತರ ಭೂಮಿಯನ್ನು ಪಡೆದು ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದೆ ಎಂದು ಆರೋಪಿಸಿದ ಅವರು, “ಬ್ರೋಕರ್ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಿದ್ದಾರೆ” ಎಂದು ಟೀಕಿಸಿದರು.


ಯೋಜನೆಗೆ ರೈತರ ಒಪ್ಪಿಗೆ ಪಡೆಯದೇ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, “ರೈತರಿಗೆ ಧಮ್ಕಿ ಹಾಕಿ ಕೋರ್ಟ್ ಮೂಲಕ ಭೂಮಿ ಅಕ್ವೈರ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಯಾರ ಅಪ್ಪನ ಮನೆಯ ಭೂಮಿಯನ್ನು ತೆಗೆದುಕೊಳ್ಳುತ್ತೀರಿ?” ಎಂದು ಪ್ರಶ್ನಿಸಿದರು.


ಬಿಡದಿ ಭಾಗದ ರೈತರು ಹಾಲು ಉತ್ಪಾದನೆ ಮೂಲಕ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ ಅವರು, “ಈ ಎಂಟು ಹಳ್ಳಿಗಳಿಂದ ತಿಂಗಳಿಗೆ ಸುಮಾರು ಆರು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇಂತಹ ಫಲವತ್ತಾದ ಭೂಮಿಯನ್ನು ನಾಶ ಮಾಡಿ ಏನು ಅಭಿವೃದ್ಧಿ ಮಾಡುತ್ತೀರಿ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.


ಯೋಜನೆಗಾಗಿ ಸರ್ಕಾರ ಹಣ ಸಂಗ್ರಹಿಸುವ ವಿಧಾನಗಳ ಮೇಲೂ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು. “ಬಿಡಿಎ ಮೂಲಕ ಮೂರು ಸಾವಿರ ಕೋಟಿ, ಅಡಮಾನ ಸಾಲ ಹಾಗೂ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆಯಲು ಯತ್ನಿಸುತ್ತಿದ್ದಾರೆ. ಇದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರ,” ಎಂದು ಆರೋಪಿಸಿದರು.


ಬೆಂಗಳೂರು ಅಭಿವೃದ್ಧಿಗೆ ತಾವು ಕೈಗೊಂಡ ಯೋಜನೆಗಳನ್ನು ನೆನಪಿಸಿಕೊಂಡ ಅವರು, ಹೆಬ್ಬಾಳದವರೆಗೆ ಟನಲ್ ರಸ್ತೆ ಹಾಗೂ ಇಂಟಿಗ್ರೇಟೆಡ್ ಎಲಿವೇಟೆಡ್ ರಸ್ತೆ ಯೋಜನೆಗಳನ್ನು ತಮ್ಮ ಆಡಳಿತಾವಧಿಯಲ್ಲೇ ಪ್ರಾರಂಭಿಸಲಾಗಿತ್ತು ಎಂದರು. “ಅಂದು ೩೦ ಕೋಟಿ ರೂಪಾಯಿಯಲ್ಲಿ ಆಗಬಹುದಾದ ರಸ್ತೆ ಈಗ ೨೦ ಸಾವಿರ ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ,” ಎಂದು ಹೇಳಿದರು.ಡಿಸಿಎಂ ಡಿಕೆಶಿ ವಿರುದ್ಧವೂ ತೀವ್ರ ಟೀಕೆ ಮಾಡಿದ ಕುಮಾರಸ್ವಾಮಿ, “ಡಿಕೆ ಶಿವಕುಮಾರ್ ಅವರ ಧಮ್ಕಿ ನಮ್ಮ ಬಳಿ ನಡೆಯುವುದಿಲ್ಲ. ರೈತರನ್ನು ಬೆದರಿಸಿ ಭೂಮಿ ಕಬಳಿಸುವ ಪ್ರಯತ್ನ ಸಹಿಸಲಾಗುವುದಿಲ್ಲ,” ಎಂದು ಎಚ್ಚರಿಸಿದರು.


ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ವ್ಯಂಗ್ಯವಾಡಿದ ಅವರು, “ಬೆಂಗಳೂರು ಯಾರ್ ಯಾರ್ ಕಾಲದಲ್ಲಿ ಯಾರ್ ಯಾರ್ ಕಾಲು ಕಟ್ತೀರಿ ಗೊತ್ತಿದೆ ನಮಗೆ. ಕೆಲವರು ಹೇಳಿದ್ದಕ್ಕೆ ಡಿಸಿ ಸೈನ್ ಹೊಡೆದುಕೊಂಡು ಕೂತಿದ್ದಾರೆ. ನಮ್ಮ ನಂಬರ್‌ನಿಂದ ಫೋನ್ ಹೋದರೂ ಡಿಸಿ ಫೋನ್ ತೆಗೆದುಕೊಳ್ಳಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಮುಖ್ಯಮಂತ್ರಿ ಅವರಿಗೆ ಪರೋಕ್ಷವಾಗಿ ಟೀಕೆ ಮಾಡಿದ ಕುಮಾರಸ್ವಾಮಿ, “ಚೇರ್ ಸಿಕ್ಕಿದ್ರೆ ಸಾಕು ಅಂತ ಕೆಲವರ ಮಾತು ಕೇಳಿಕೊಂಡು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬೇಡಿ. ಕೊನೆಗಾಲದಲ್ಲಿ ಗೌರವಯುತವಾಗಿ ಹೆಸರು ತೆಗೆದುಕೊಂಡು ಹೋಗಿ” ಎಂದು ಹೇಳಿದರು.


ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ ಅವರು, “ಹಲವರು ಭಾಗ್ಯ ಕೊಟ್ಟೇ ೨೦೧೮ರಲ್ಲಿ ನಿಮ್ಮನ್ನು ೮೫ ಸ್ಥಾನಗಳಿಗೆ ಇಳಿಸಿದರು. ಇಂಥ ಗ್ಯಾರಂಟಿ ಕೊಟ್ಟು ಜನ ಉಳಿಸ್ತಾರೆ ಅಂತ ಭಾವಿಸಬೇಡಿ” ಎಂದರು.