
ಕಲಬುರಗಿ :ಮೇ.14: ಸಸ್ಯಗಳಿಗೆ ಬರುವ ವಿವಿಧ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ ಸಲಹೆ ನೀಡಿದರು. ತಾಲೂಕಿನ ಗಣಜಲಖೇಡ ಗ್ರಾಮದ ಚೆಂಡು ಹೂ ತೋಟವೊಂದರಲ್ಲಿ ಬುಧವಾರ ಜರುಗಿದ “ರಾಷ್ಟ್ರೀಯ ಸಸ್ಯರೋಗ ನಿಯಂತ್ರಣ ದಿನಾಚರಣೆ”ಯಲ್ಲಿ ಚೆಂಡು ಹೂಗಳನ್ನು ಪರಿಶೀಲಿಸಿ, ನಂತರ ಅವರು ಮಾತನಾಡಿದರು. ಹಿಂದಿನ ಬೆಳೆಯ ತ್ಯಾಜ್ಯಗಳು ಮತ್ತು ಕಳೆಗಳನ್ನು ಸಂಪೂರ್ಣವಾಗಿ ನಾಶಮಾಡಬೇಕು. ಕೊಳೆಯುತ್ತಿರುವ ಎಲೆ ಅಥವಾ ಹಣ್ಣುಗಳನ್ನು ತಕ್ಷಣವೇ ತೆಗೆದುಹಾಕಬೇಕು. ಗಿಡಗಳನ್ನು ತುಂಬಾ ಹತ್ತಿರ ಹತ್ತಿರ ನೆಡಬೇಡಿ. ಸುರಕ್ಷಿತ ಅಂತರ ಕಾಪಾಡಬೇಕು. ಇಲ್ಲವಾದರೆ ಇದು ಗಾಳಿಯಾಡಲು ಅವಕಾಶ ಮಾಡಿಕೊಟ್ಟು ಶಿಲೀಂಧ್ರ ರೋಗಗಳನ್ನು ತಡೆಯುತ್ತದೆ.
ಬೆಳಗ್ಗೆ ಬೇಗನೆ ನೀರು ಹಾಕಿ. ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಿ ಮತ್ತು ಎಲೆಗಳು ಒದ್ದೆಯಾಗುವುದನ್ನು ತಪ್ಪಿಸಿ.
ಒಂದೇ ಜಾಗದಲ್ಲಿ ಪ್ರತಿ ವರ್ಷ ಒಂದೇ ರೀತಿಯ ಬೆಳೆ ಬೆಳೆಯಬೇಡಿ. ಇದರಿಂದ ಮಣ್ಣಿನಲ್ಲಿ ರೋಗಾಣುಗಳು ಹೆಚ್ಚಾಗುವುದನ್ನು ತಡೆಯಬಹುದು. ಕೀಟಗಳು ಸಸ್ಯಗಳಿಗೆ ರೋಗ ತರುವ ಮುಖ್ಯ ವಾಹಕಗಳಾಗಿವೆ. ಕಾಲಕಾಲಕ್ಕೆ ಕೀಟಗಳನ್ನು ನಿಯಂತ್ರಿಸಿ. ಯಾವಾಗಲೂ ಉತ್ತಮ ಗುಣಮಟ್ಟದ ಮತ್ತು ರೋಗ-ಮುಕ್ತ ಬೀಜಗಳನ್ನು ಮಾತ್ರ ಬಳಸಿ ಎಂದು ಅನೇಕ ಮುಂಜಾಗ್ರತೆಯ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಎಚ್.ಬಿ.ಪಾಟೀಲ, ಬಸವರಾಜ, ಅನೀಲಕುಮಾರ, ರಾಜಕುಮಾರ ಸೇರಿದಂತೆ ಇನ್ನಿತರರಿದ್ದರು.























