
ಚೆನ್ನೈ.ಮೇ. ೧೩- ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಆಪ್ತ ಜ್ಯೋತಿಷಿ ರಾಧನ್ ಪಂಡಿತ್ ಅವರನ್ನ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಿ ಮಾಡಿಕೊಂಡಿದ್ದಕ್ಕೆ ಮೈತ್ರಿ ಪಕ್ಷಗಳು ಹಾಗೂ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಜ್ಯೋತಿಷಿ ರಾಜ್ಯ ಪಂಡಿತ ಅವರನ್ನು ಆ ಹುದ್ದೆಯಿಂದ ತೆಗೆದು ಹಾಕಿದ್ದಾರೆ
ತಮಿಳುನಾಡು ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿಯಾಗಿ (ಒಎಸ್‌ಡಿ) ನೇಮಕಗೊಂಡಿದ್ದ ಟಿವಿಕೆ ಪಕ್ಷದ ವಕ್ತಾರ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರನ್ನು ಮೈತ್ರಿಪಕ್ಷಗಳ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಹುದ್ದೆಯಿಂದ ವಜಾಗೊಳಿಸಿದ್ದಾರೆ.
ನೇಮಕಾತಿ ಆದೇಶ ಹೊರಬಿದ್ದ ಕೇವಲ ಒಂದೇ ದಿನದಲ್ಲಿ ಈ ಆದೇಶವನ್ನು ರದ್ದುಗೊಳಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಸರ್ಕಾರದ ಆದೇಶದಲ್ಲಿ ಏನಿದೆ
ಮೇ ೧೨ರಂದು ರಾಧನ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಒಎಸ್‌ಡಿ ಆಗಿ ನೇಮಿಸಲಾಗಿತ್ತು. ಆದರೆ, ಮೇ ೧೩ರ ಬುಧವಾರದಂದು ಸಾರ್ವಜನಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೀಟಾ ಹರೀಶ್ ಥಕ್ಕರ್ ಅವರು ಅಧಿಕೃತ ಆದೇಶ ಹೊರಡಿಸಿದ್ದು, “ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರ ನೇಮಕಾತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ,” ಎಂದು ತಿಳಿಸಿದ್ದಾರೆ.
ವಜಾಕ್ಕೆ ಕಾರಣವೇನು
ವಿಜಯ್ ಅವರ ಈ ಅನಿರೀಕ್ಷಿತ ತೀರ್ಮಾನಕ್ಕೆ ಮೈತ್ರಿಕೂಟದ ಪಕ್ಷಗಳ ಅಸಮಾಧಾನವೇ ಪ್ರಮುಖ ಕಾರಣ ಎನ್ನಲಾಗಿದೆ. ಟಿವಿಕೆ ವಕ್ತಾರರೊಬ್ಬರನ್ನು ನೇರವಾಗಿ ಮುಖ್ಯಮಂತ್ರಿ ಕಚೇರಿಯ ಪ್ರಭಾವಿ ಹುದ್ದೆಗೆ ನೇಮಿಸಿರುವುದಕ್ಕೆ ಮಿತ್ರಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬೆಳವಣಿಗೆಯು ಮೈತ್ರಿಕೂಟದ ಒಗ್ಗಟ್ಟಿಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ, ವಿಜಯ್ ಅವರು ಹಿನ್ನಡೆ ಅನುಭವಿಸಿ ನೇಮಕಾತಿ ಆದೇಶವನ್ನು ವಾಪಸ್ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ..

























