
ನವದೆಹಲಿ,ಏ.೨೩ – ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಇಂದು ಮತದಾನ ಬಿಗಿಭದ್ರತೆಯಲ್ಲಿ ಆರಂಭವಾಗಿದ್ದು, ತಮಿಳುನಾಡಿನಲ್ಲಿ ಮತದಾನ ಶಾಂತಿಯುತವಾಗಿ ಸಾಗಿದ್ದರೆ, ಪಶ್ಚಮ ಬಂಗಾಳದಲ್ಲಿ ಮತದಾನ ಸಂದರ್ಭದಲ್ಲಿ ಹಿಂಸಾಕೃತ್ಯಗಳು ನಡೆದಿವೆ.
ತಮಿಳುನಾಡಿನ ಎಲ್ಲಾ ೨೩೪ ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದಿರುವ ಮತದಾನ ಬಹುತೇಕ ಶಾಂತಿಯುತವಾಗಿದ್ದು ತಮಿಳುನಾಡಿನಾದ್ಯಂತ ಮತದಾನ ಬಿರುಸಿನಿಂದ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ೧೫೨ ಕ್ಷೇತ್ರಗಳಿಗೆ ನಡೆದಿರುವ ಮತದಾನದ ಸಂದರ್ಭದಲ್ಲಿ ಕಚ್ಚಾ ಬಾಂಬ್ ದಾಳಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಪಶ್ಚಿಮ ಬಂಗಾಳ ಮುಷಿರಾಬಾದ್ ಜಿಲ್ಲೆಯಲ್ಲಿ ಮತದಾನ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್ ದಾಳಿ ನಡೆಸಿದ್ದು , ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಮುಷಿರಾಬಾದ್ ಜಿಲ್ಲೆಯ ನೌಡಾದಲ್ಲಿ ಈ ಕಚ್ಚಾ ಬಾಂಬ್ ದಾಳಿ ನಡೆದಿದ್ದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಕಚ್ಚಾ ಬಾಂಬ್ ದಾಳಿಯ ಬಳಿಕ ಹಿಂಸಾಚಾರ ಪೀಡತವಾಗಿರುವ ಮುಷಿರಾಬಾದ್ ನಲ್ಲಿ ಭದ್ರತೆ ಪಶ್ಚಿಮ ಬಂಗಾಳದಲ್ಲಿ ಶೇ. ೫೦ ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿರುವ ೧೫೨ ಕ್ಷೇತ್ರಗಳಲ್ಲಿ ಚುರುಕಿನಿಂದ ಮತದಾನ ಸಾಗಿದೆ. ಮೊದಲ ಹಂತದಲ್ಲಿ ೧೬ ಜಿಲ್ಲೆಗಳ ೧೫೨ ಕ್ಷೇತ್ರಗಳಲ್ಲಿ ೧೪೭೮ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಿದ್ದಾರೆ. ರಾಜಕೀಯ ಹಣೆಬರಹ ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿದೆ.
ತಮಿಳುನಾಡಿನಲ್ಲಿ ಬಿರುಸಿನ ಮತದಾನ
೨೩೪ ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ನಡೆದಿರುವ ಮತದಾನ ಬಿರುಸಿನಿಂದ ಸಾಗಿದ್ದು, ಬೆಳಿಗ್ಗೆ ೯ ಗಂಟೆಯ ಹೊತ್ತಿಗೆ ಶೇ. ೧೭.೬೯ ರಷ್ಟು ಮತದಾನವಾಗಿದೆ. ಇಂದು ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿದ್ದು ಮಧ್ಯಾಹ್ನ ೨ ಗಂಟೆಯ ಹೊತ್ತಿಗೆ ತಮಿಳುನಾಡಿನಲ್ಲಿ ಶೇ. ೬೦ರಷ್ಟು ಮತದಾನವಾಗಿದ್ದರೆ ಪಶ್ಚಿಮ ಬಂಗಾಳದಲ್ಲಿ ಶೇ. ೬೦ ರಷ್ಟು ಮತದಾನವಾಗಿದೆ ಎಂದು ಹೇಳಲಾಗಿದೆ.
ತಮಿಳುನಾಡಿನ ೨೩೪ ಕ್ಷೇತ್ರಗಳಲ್ಲಿ ೪೦೨೩ ಅಭ್ಯರ್ಥಿಗಳು ಕಣದಲ್ಲಿದ್ದು, ಇವರೆಲ್ಲರ ರಾಜಕೀಯ ಭವಿಷ್ಯಕ್ಕೆ ಮತದಾರರ ಮುದ್ರೆ ಹೊತ್ತಿದ್ದಾರೆ. ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದರೆ, ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಮತ್ತೆ ಅಧಿಕಾರಿದ ಗದ್ದುಗೆ ಹೇರಲು ಹರಸಾಹಸ ನಡೆಸಿದೆ.
ಈ ೨ರ ಮಧ್ಯೆ ನಟ ವಿಜಯನ್ ನೇತೃತ್ವದ ಟಿವಿಕೆ ಪಕ್ಷ ಕೂಡ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅಧಿಕಾರದ ಕನಸನ್ನು ನನಸು ಮಾಡಿಕೊಳ್ಳು ಪ್ರಯತ್ನ ನಡೆದಿದೆ. ಚುನಾವಣೆ ಮತ ಎಣಿಕೆ ಮೇ ೪ ರಂದು ನಡೆಯಲಿದ್ದು, ಅಂದು ಮತದಾನ ತೀರ್ಪು ಬಹಿರಂಗಗೊಳ್ಳಲಿದೆ.
ಗಣ್ಯರ ಮತದಾನ
ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಮಗ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹಾಗೂ ಅವರ ಕುಟುಂಬ ಸದಸ್ಯರು ಇಂದು ಬೆಳಿಗ್ಗೆಯೇ ಚೆನ್ನೈ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಸ್ಟಾಲಿನ್ ಅವರು ಕೊಳತ್ತೂರು ಕ್ಷೇತ್ರದಿಂದ ಅವರ ಮಗ ಉದಯ ನಿಧಿ ಸ್ಟಾಲಿನ್ ಚೆಪಾಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

























