
ವಿಜಯಪುರ, ಏ. 23: ರಾಮಾನುಜರು ಸಮಾಜದಲ್ಲಿನ ತಾರತಮ್ಯ ತೊಡೆದುಹಾಕಿ, ಮಾನವೀಯತೆ-ಭಕ್ತಿಯನ್ನು ಎತ್ತಿ ಹಿಡಿದ ಮಹಾನ್ ಸಂತರು. ಅವರು ಬೋಧಿಸಿದ ಜಗತ್ತಿನ ಸತ್ಯತೆ-ಸಾಮಾಜಿಕ ಸಮಾನತೆ ಇಂದಿಗೂ ಪ್ರಸ್ತುತ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಬುಧವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ರಾಮಾನುಜಾಚಾರ್ಯರ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾಗತೀಕರಣದ ಈ ಯುಗದಲ್ಲಿ ವೈವಿಧ್ಯತೆಯಲ್ಲಿ ಏಕತೆ ಸಾಧಿಸಲು, ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ನೆಮ್ಮದಿಗಾಗಿ ರಾಮಾನುಜರ ನಿಷ್ಕಲ್ಮಶ ಭಕ್ತಿಮಾರ್ಗವು ಮಾರ್ಗದರ್ಶಿಯಾಗಿದೆ. ದೇವಸ್ಥಾನದ ಬಾಗಿಲುಗಳನ್ನು ತೆರೆಯುವ ಮೂಲಕ ಎಲ್ಲರಲ್ಲಿ ಸಾಮಾಜಿಕ ಒಗ್ಗಟ್ಟನ್ನು ಸಾಧಿಸಿದ ರಾಮಾನುಜಾಚಾರ್ಯರ ತತ್ವಗಳು ಮಾನವತಾವಾದಿ, ಪ್ರೀತಿಯಾಧಾರಿತ ಸಮಾಜ ನಿರ್ಮಿಸಲು ಇಂದಿಗೂ ದಾರಿದೀಪವಾಗಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಮಾತನಾಡಿ, ಶ್ರಿ? ರಾಮಾನುಜರ ಉಜ್ವಲ ವ್ಯಕ್ತಿತ್ವ, ಬುದ್ದಿ ತೀಕ್ಷ್ಣತೆ, ಅದ್ಭುತ ಗ್ರಂಥರಚನಾ ಸಾಮಥ್ರ್ಯ, ಅಸದೃಶ್ಯ ಪಾಂಡಿತ್ಯ, ಕಾರುಣ್ಯ, ಕಾರ್ಯತತ್ಪರತೆ, ಪರಿಶುದ್ಧ ಜೀವನ, ತೀರ್ಥಯಾತ್ರೆ, ದೇವಾಲಯ ಪುನರುದ್ಧಾರದಂತಹ ಗುಣಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಹೇಳಿದರು.
ಶಿಕ್ಷಕರಾದ ಸಂಗೀತಾ ಅಂಕಲಗಿ, ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.






















