
ಮಂಡ್ಯ, ಅ. ೨೬- ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಬರ ಪರಿಸ್ಥಿತಿ ಉಂಟಾಗಿದೆ. ಕಾವೇರಿ ಕೊಳ್ಳದಲ್ಲಿ ಮಳೆಬೀಳುತ್ತಿರುವುದು ರೈತರ ಮೊಗದಲ್ಲಿ ಆಶಾಭಾವ ಮೂಡಿಸಿದೆ.
ನಿನ್ನೆ ೯,೪೭೫ ಕ್ಯೂಸೆಕ್ನಷ್ಟಿದ್ದ ಜಲಾಶಯದ ಒಳಹರಿವು, ಇಂದು ೧೧,೮೬೪ ಕ್ಯೂಸೆಕ್ಗೆ ತಲುಪಿದೆ. ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಹೀಗಾಗಿ ಒಳಹರಿವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಒಳಹರಿವು ಹೆಚ್ಚಾಗಿದ್ದರಿಂದ ಕೆಆರ್ ಎಸ್ ನ ನೀರಿನ ಮಟ್ಟವು ೧೦೩.೯೬ ಅಡಿಗೆ ಏರಿಕೆಯಾಗಿದೆ. ಪ್ರಸ್ತುತ ಜಲಾಶಯದಲ್ಲಿ ೨೬.೦೭೪ ಟಿಎಂಸಿ ನೀರು ಸಂಗ್ರಹವಾಗಿದ್ದು, ನದಿಗೆ ೧,೯೯೬ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ ನೀರಿನ ಹರಿವು ಉತ್ತಮವಾಗಿರುವುದರಿಂದ ಅನ್ನದಾತರ ಮುಖದಲ್ಲಿ ಹರ್ಷ ಮೂಡಿದೆ.


























