
ತುಮಕೂರು, ಮೇ ೧೧- ತಂತ್ರಜ್ಞಾನದ ಅಬ್ಬರ ಎಷ್ಟೇ ಇದ್ದರೂ ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಕಲೆಗಳು ನಮಗೆ ಬದುಕಿನ ಬೇರುಗಳಿದ್ದಂತೆ; ಮನರಂಜನೆಯು ಕೇವಲ ಮೋಜಲ್ಲ, ಅದು ನಮ್ಮ ಸಂಸ್ಕಾರವನ್ನು ಪ್ರತಿಬಿಂಬಿಸುವ ಪವಿತ್ರ ಮಾಧ್ಯಮವಾಗಿದೆ. ಪುಸ್ತಕದ ಜ್ಞಾನ ಜಾಣನನ್ನಾಗಿ ಮಾಡಬಹುದು, ಆದರೆ ಸಾಂಸ್ಕೃತಿಕ ವೇದಿಕೆಗಳು ಸಂವೇದನಾಶೀಲ ಮನುಷ್ಯನನ್ನಾಗಿ ಮಾಡುತ್ತವೆ. ಈ ನಿಟ್ಟಿನಲ್ಲಿ ’ವಿವಿಯನ್ ವೈವಿಧ್ಯ ಎಂಬುದು ಸೃಜನಶೀಲ ಪ್ರತಿಭೆಗಳು ಮುಕ್ತವಾಗಿ ಹಾರಾಡಲು ನಾವು ನಿರ್ಮಿಸಿದ ಬಣ್ಣದ ಆಕಾಶವಾಗಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್. ಬಿ. ಪ್ರದೀಪ್ ಕುಮಾರ್ ಹೇಳಿದರು.
ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಾದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು, ವೈಸಿರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿ ಹಾಗೂ ವಿದ್ಯಾವಾಹಿನಿ ಪ್ಯಾರಾಮೆಡಿಕಲ್ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿಗಿದ್ದ ವಾರ್ಷಿಕ ಸಾಂಸ್ಕೃತಿಕ ಹಬ್ಬ ’ವಿವಿಯನ್ ವೈವಿಧ್ಯ-೨೦೨೬’ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಬೌದ್ಧಿಕ ಶ್ರಮಕ್ಕೆ ಮನರಂಜನೆಯು ಹೊಸ ಚೈತನ್ಯ ತುಂಬುವ ಅಮೃತದಂತೆ ಕೆಲಸ ಮಾಡುವುದಲ್ಲದೆ, ಇಂತಹ ಸಾಂಸ್ಕೃತಿಕ ಹಬ್ಬಗಳು ದೈನಂದಿನ ಏಕತಾನತೆಯನ್ನು ದೂರ ಮಾಡಿ ಸಂಘಟನಾ ಶಕ್ತಿ ಮತ್ತು ಶ್ರೇಷ್ಟ ವ್ಯಕ್ತಿತ್ವವನ್ನು ವೃದ್ಧಿಸುತ್ತವೆ. ವಿಶೇಷವಾಗಿ ರಘು ದೀಕ್ಷಿತ್ ಅವರಂತಹ ಮಹಾನ್ ಕಲಾವಿದರು ನಮ್ಮೊಂದಿಗೆ ಸೇರಿರುವುದು ನಮ್ಮ ಸೌಭಾಗ್ಯ. ಇಂತಹ ರಸ ಸಂಜೆಗಳು ನಿಮ್ಮ ಒತ್ತಡದ ಶೈಕ್ಷಣಿಕ ಜೀವನಕ್ಕೆ ಹೊಸ ಹುರುಪು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಆವರಣದಲ್ಲಿ ಜರುಗಿದ ಈ ಸಾಂಸ್ಕೃತಿಕ ಸಂಭ್ರಮವು ಖ್ಯಾತ ಗಾಯಕ ರಘು ದೀಕ್ಷಿತ್ ಅವರ ಸ್ವರ ಲಹರಿಯೊಂದಿಗೆ ಕಳೆಗಟ್ಟಿತ್ತು. ಈ ಸಂಗೀತ ರಸ ಸಂಜೆಯು ವಿದ್ಯಾರ್ಥಿಗಳ ಪಾಲಿಗೆ ಒಂದು ಅವಿಸ್ಮರಣೀಯ ಅನುಭವವಾಗಿ ಮೂಡಿಬಂತು.
ಖ್ಯಾತ ಗಾಯಕ ರಘು ದೀಕ್ಷಿತ್ ಅವರು, ತಮ್ಮ ವಿಶಿಷ್ಟ ಜಾನಪದ ಶೈಲಿಯ ಗಾಯನದ ಮೂಲಕ ಇಡೀ ಮೈದಾನದಲ್ಲಿ ವಿದ್ಯುತ್ ಸಂಚಲನ ಮೂಡಿಸಿದರು. ತಮ್ಮ ಜನಪ್ರಿಯ ಗೀತೆಗಳಾದ ’ನೀನೇ ಬೇಕು’, ’ಈ ಜೀವನ ಮೂರೇ ದಿನ’ ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ಅವರ ಅದ್ಭುತ ಕಂಠಸಿರಿ ಮತ್ತು ವೇದಿಕೆಯ ಮೇಲಿನ ಲವಲವಿಕೆಯ ಪ್ರದರ್ಶನಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿತು.
ಕಾರ್ಯಕ್ರಮಕ್ಕೆ ಮತ್ತೆ ಮೆರುಗು ನೀಡಿದ್ದು ಅತ್ಯಾಧುನಿಕ ಬೆಳಕಿನ ವಿನ್ಯಾಸ ಮತ್ತು ಧ್ವನಿ ವ್ಯವಸ್ಥೆ. ರಘು ದೀಕ್ಷಿತ್ ಅವರ ಹಾಡುಗಳಿಗೆ ಪೂರಕವಾಗಿ ಮೂಡಿ ಬಂದ ವರ್ಣ ರಂಜಿತ ಬೆಳಕು ಮತ್ತು ಆಗಸದಲ್ಲಿ ಚಿತ್ತಾರ ಮೂಡಿಸಿದ ಸಿಡಿ ಮದ್ದುಗಳ ಪ್ರದರ್ಶನ ಇಡೀ ಪರಿಸರವನ್ನು ಹಬ್ಬದಂತೆ ಕಂಗೊಳಿಸುವಂತೆ ಮಾಡಿತ್ತು. ರಘು ದೀಕ್ಷಿತ್ ಅವರ ಸಂಗೀತ ಸುಧೆಯ ನಂತರ, ಡಿಜೆ ರುಬ್ಸ್ ನಡೆಸಿಕೊಟ್ಟ ಸಂಗೀತದ ಅಬ್ಬರಕ್ಕೆ ವಿದ್ಯಾರ್ಥಿಗಳು ಸಂಭ್ರಮದಿಂದ ಹೆಜ್ಜೆ ಹಾಕಿದರು. ಒಂದೆಡೆ ಜಾನಪದ ಸೊಗಡಿನ ಸಂಗೀತವಿದ್ದರೆ, ಮತ್ತೊಂದೆಡೆ ಆಧುನಿಕ ಡಿಜೆ ತಾಳಕ್ಕೆ ವಿದ್ಯಾರ್ಥಿಗಳು ಮೈಮರೆತು ಕುಣಿದರು.
ಇದೇ ಸಂದರ್ಭದಲ್ಲಿ ವಿದ್ಯಾವಾಹಿನಿ ಕಾಲೇಜಿನಿ ಬಿಸಿಎ ವಿದ್ಯಾರ್ಥಿಗಳು ಕೈಗೊಂಡಿದ್ದ ವಿನೂತನ ತಾಂತ್ರಿಕ ಪ್ರಯೋಗವನ್ನು ಗುರುತಿಸಿ, ಎನ್. ಬಿ. ಪ್ರದೀಪ್ ಕುಮಾರ್ ಅವರು ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಿದರು. ಗಾಯಕ ರಘು ದೀಕ್ಷಿತ್ ಅವರ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳೇ ಸ್ವತಃ ಸಿದ್ಧಪಡಿಸಿದ್ದ ಡಿಜಿಟಲ್ ಪಾಸ್ ರೂಪಿಸುವ ವಿಶಿಷ್ಟ ಯೋಜನೆ ಎಲ್ಲರ ಗಮನ ಸೆಳೆಯಿತು. ಇಂತಹ ಕ್ರಿಯಾಶೀಲ ಮತ್ತು ತಾಂತ್ರಿಕ ಕೌಶಲ ಮೆರೆದ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ವಿಶೇಷವಾಗಿ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಕೆ. ಬಿ. ಜಯಣ್ಣ, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ ಎ., ವೈಸಿರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಹುಮೇರಾ ಪರ್ವೀನ್, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಸಿದ್ಧೇಶ್ವರಸ್ವಾಮಿ ಮತ್ತಿತರರು ಭಾಗವಹಿಸಿದ್ದರು


























