Home ಜಿಲ್ಲೆ ಮಸೀದಿಯ ಸಮೀಪದಲ್ಲಿ ಮದ್ಯದಂಗಡಿ ಪರವಾನಿಗೆ ನೀಡದಂತೆ ಪ್ರತಿಭಟನೆ

ಮಸೀದಿಯ ಸಮೀಪದಲ್ಲಿ ಮದ್ಯದಂಗಡಿ ಪರವಾನಿಗೆ ನೀಡದಂತೆ ಪ್ರತಿಭಟನೆ

ಅಥಣಿ :ಮೇ.೪: ಪಟ್ಟಣದ ಅಥಣಿ ಗೋಕಾಕ ರಸ್ತೆಯಲ್ಲಿರುವ ನಿಮ್ರಾ ಮಸೀದಿಯ ಪಕ್ಕದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊAಡAತೆ ನೂತನವಾಗಿ ಮದ್ಯದಂಗಡಿ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ ಅಂಜುಮನ್ ಎ ಇಸ್ಲಾಂ ಕಮಿಟಿ ಹಾಗೂ ಮುಸ್ಲಿಂ ಸಮಾಜ ಬಾಂಧವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರದೆಂದು ಆಗ್ರಹಿಸಿ ಅಂಜುಮನ್ ಕಮಿಟಿಯ ನೇತೃತ್ವದಲ್ಲಿ ತಹಸೀಲ್ದಾರ್, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಈ ಭಾಗದಲ್ಲಿ ಮದ್ಯದ ಅಂಗಡಿ ತೆರೆಯುವುದರಿಂದ ವಸತಿ ಪ್ರದೇಶದ ಮಹಿಳೆಯರು, ಮಕ್ಕಳು ಹಾಗೂ ಮಸೀದಿಗೆ ಬರುವ ಭಕ್ತಾದಿಗಳಿಗೆ ಸಂಚಾರ ಮಾಡಲು ಮತ್ತು ಶಾಂತಿಯುತವಾಗಿ ಬದುಕಲು ತೊಂದರೆಯಾಗುತ್ತದೆ. ಮದ್ಯಪಾನಿಗಳ ಹಾವಳಿಯಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಪರವಾನಗಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ನಿಮ್ರಾ ಮಸೀದಿ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದ ಬಾಂಧವರು ಸೇರಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮುಸ್ಲಿಂ ಧರ್ಮಗುರು ಮೌಲಾನ ಅಬ್ಬಾಸ್ ಅವರು ಮಾತನಾಡಿ ಪ್ರತಿಯೊಂದು ಧರ್ಮದಲ್ಲೂ ಆಯಾ ಧರ್ಮದ ಪವಿತ್ರ ಧಾರ್ಮಿಕ ಕೇಂದ್ರಗಳಿಗೆ ಅತ್ಯುನ್ನತ ಸ್ಥಾನವಿದೆ. ಮುಸ್ಲಿಮರಿಗೆ ಮಸೀದಿ, ಹಿಂದೂಗಳಿಗೆ ಮಂದಿರ ಹೀಗೆ ಎಲ್ಲಾ ಧರ್ಮದವರಿಗೂ ಅವರದ್ದೇ ಆದ ಶ್ರದ್ಧಾ ಕೇಂದ್ರಗಳಿವೆ. ಇಂತಹ ಪವಿತ್ರ ಸ್ಥಳಗಳ ಆಸುಪಾಸಿನಲ್ಲಿ ಮದ್ಯದ ಅಂಗಡಿ ಇರುವುದನ್ನು ಯಾವುದೇ ಧರ್ಮದ ಜನರು ಇಷ್ಟಪಡುವುದಿಲ್ಲ. ಇದು ಸಮಾಜದ ಶಾಂತಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಷಯವಾಗಿದೆ. ನಮ್ಮ ತಾಲೂಕು ಇದುವರೆಗೂ ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಹೆಸರು ವಾಸಿಯಾಗಿದೆ. ವಿವಿಧ ಧರ್ಮದ ಜನರು ಇಲ್ಲಿ ಪರಸ್ಪರ ಪ್ರೀತಿ ಮತ್ತು ಒಗ್ಗಟ್ಟಿನಿಂದ ಬದುಕುತ್ತಿದ್ದೇವೆ. ಈ ಸೌಹಾರ್ದತೆ ಸಹೋದರತೆ ಮುಂದೆಯೂ ಹೀಗೆಯೇ ಮುಂದುವರಿಯಲಿ ನಾವು ಆಶಿಸುತ್ತೇವೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಈ ಪ್ರದೇಶದ ಪವಿತ್ರತೆಯನ್ನು ಕಾಪಾಡುವ ಸಲುವಾಗಿ, ಮಸೀದಿಯ ಸಮೀಪ ಯಾವುದೇ ಕಾರಣಕ್ಕೂ ಮದ್ಯ ಮಾರಾಟದ ಪರವಾನಗಿಯನ್ನು (ಲೈಸನ್ಸ್) ನೀಡಬಾರದೆಂದು ನಾವು ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ. ಜನಸಾಮಾನ್ಯರ ಭಾವನೆಗಳನ್ನು ಗೌರವಿಸಿ ತಾವು ಸೂಕ್ತ ಕ್ರಮ ಕೈಗೊಳ್ಳುತ್ತೀರೆಂದು ನಂಬಿದ್ದೇವೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರದು. ಧಾರ್ಮಿಕ ಆಚರಣೆ ವಿರುದ್ದವಾದ ನಡುವಳಿ ನಡೆಯುತ್ತಿದ್ದು ಅದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸರಕಾರ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಒಂದು ವೇಳೆ ಮದ್ಯ ಮಾರಾಟದ ಪರವಾನಿಗೆ ನೀಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು
ಈ ವೇಳೆ ಅಂಜುಮನ್ ಕಮಿಟಿಯ ಅಧ್ಯಕ್ಷ ಸೈಯ್ಯದಅಮೀನ ಗದ್ಯಾಳ ಮಾತನಾಡಿ
ಮದ್ಯದ ಅಂಗಡಿ ಸ್ಥಾಪನೆಗೆ ಅಬಕಾರಿ ನಿಯಮಗಳ ಪ್ರಕಾರ ವಸತಿ ಪ್ರದೇಶ, ಧಾರ್ಮಿಕ ಸ್ಥಳ, ಆಸ್ಪತ್ರೆ ಹಾಗೂ ಶಾಲೆಗಳಿಂದ ಕನಿಷ್ಠ ೧೦೦ ಮೀಟರ್ ದೂರವಿರಬೇಕು. ಅಲ್ಲದೆ, ರಾಜ್ಯ ಹೆದ್ದಾರಿಯಿಂದಲೂ ನಿಗದಿತ ದೂರ ಕಾಯ್ದುಕೊಳ್ಳುವುದು ಕಡ್ಡಾಯ. ಆದರೆ, ಈಗ ಉದ್ದೇಶಿತ ಮದ್ಯದ ಅಂಗಡಿಯು ನಿಮ್ರಾ ಮಸೀದಿಯ ತೀರ ಹತ್ತಿರದಲ್ಲಿದ್ದು, ರಾಜ್ಯ ಹೆದ್ದಾರಿಗೆ ಹೊಂದಿಕೊAಡಿದೆ. ಇದರ ಸುತ್ತಮುತ್ತ ವಸತಿ ಪ್ರದೇಶಗಳಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು
ಆನಂತರ ಮುಸ್ಲಿಂ ಮುಖಂಡ ಮುಸ್ತಾಕ್ ಮುಲ್ಲಾ ಮಾತನಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಧರ್ಮಗಳ ಪ್ರಾರ್ಥನಾ ಸ್ಥಳಗಳ ಹತ್ತಿರ ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡಬಾರದು ಒಂದು ವೇಳೆ ನೀಡಿದ್ದೇ ಆದರೆ ಜಾತ್ಯತೀತವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು

ಈ ವೇಳೆ ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಜುಬೇರ್, ಮೌಲಾನಾ ಇಸಾಕ್, ಮುಖಂಡರಾದ ಯುನೂಸ್ ಮುಲ್ಲಾ. ಅಸ್ಲಮ್ ನಾಲಬಂದ. ಐ ಜಿ ಬಿರಾದರ, ಬುಡ್ಡು ನಾಲಬಂದ. ಶಮಶುದ್ದಿನ್ ಡಾಂಗೆ. ಬಾಬು ಖೇಮಲಾಪುರ, ಮುಸ್ತಾಕ್ ಮುಲ್ಲಾ. ಆಸೀಫ್ ತಾಂಬೋಳಿ. ಶಕೀಲ ಹೇರವಾಡೆ. ಉಮರ್ ನಾಲಬಂದ, ಶಬ್ಬೀರ್ ಸಾತಬಚ್ಚೆ. ಮಂಜು ಹೋಳಿಕಟ್ಟಿ. ಗುಲಾಬ ನಾಲಂಬAದ. ಅಂಜುಮನ್ ಕಮಿಟಿಯ ಜುಬೇರ್ ನಾಲಬಂದ, ರಿಯಾಜ್ ಸನದಿ, ಅಬ್ದುಲಅಜೀಜ್ ಮುಲ್ಲಾ, ಅಬೀದ್ ಮಾಸ್ಟರ್, ಸೈಯ್ಯದ್ ಗಡ್ಡೇಕರ, ಅಬೂಬಕರ್ ಕೊಕಟನೂರ. ಇಮ್ರಾನ್ ಪಟಾಯಿತ್. ಸಲ್ಮಾನ್ ಮೌಲ್ವಿ. ಅಜಹರ ಮುಲ್ಲಾ. ಸೇರಿದಂತೆ ಮುಸ್ಲಿಂ ಬಾಂಧವರು ಹಾಗೂ ಮುಖಂಡರು ಉಪಸ್ಥಿತರಿದ್ದರು.