
ಕೋಲಾರ, ಸೆ. ೨೫: ರಾಜ್ಯದ ಪ್ರಥಮ ಮಾಜಿ ಮುಖ್ಯ ಮಂತ್ರಿ ಕೆ. ಚೆಂಗಲರಾಯ ರೆಡ್ಡಿ ಅವರ ಹೆಸರನ್ನು ಕೋಲಾರದ ಹಳೆ ಬಸ್ ನಿಲ್ದಾಣಕ್ಕೆ ಇಡಲು ನಿರ್ಧಾರವಾಗಿದ್ದು, ಈ ಸಂಬಂಧದಲ್ಲಿ ಯಾರಾದರೂ ಅಕ್ಷೇಪಣೆಗಳನ್ನು ಸಲ್ಲಿಸುವವರಿದ್ದರೆ ೩೦ ದಿನದೊಳಗೆ ಕೋಲಾರ ನಗರಸಭೆಗೆ ನಿಖರವಾದ ಕಾರಣಗಳೊಂದಿಗೆ ದಾಖಲೆ ಸಮೇತ ಸಲ್ಲಿಸ ಬಹುದು ಎಂದು ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರು ತಿಳಿಸಿದ್ದಾರೆ.
ಕೆ.ಜಿ.ಎಫ್. ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದ ಕೆ.ಸಿ.ರೆಡ್ಡಿ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ರಾಜ್ಯದ ಪ್ರಥಮ ಮುಖ್ಯಮಂತ್ರಿಗಳು, ರಾಜ್ಯಸಭಾ ಸದಸ್ಯರು, ಹಾಗೂ ಲೋಕಸಭಾ ಸದಸ್ಯರಾಗಿ ಕೇಂದ್ರದಲ್ಲಿ ವಸತಿ ಮತ್ತು ವಾಣಿಜ್ಯ ಕೈಗಾರಿಕೆ ಸಚಿವರಾಗಿ ಮತ್ತು ಮಧ್ಯ ಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಇಂದಿನ ಬಿ.ಜಿ.ಎಂ.ಎಲ್. ಕಾರ್ಖಾನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದೇಶಕ್ಕೆ, ರಾಜ್ಯಕ್ಕೆ, ಹಾಗೂ ಜಿಲ್ಲೆಗೆ ಸಲ್ಲಿಸಿರುವ ಇವರ ಕೊಡುಗೆಗಳು ಅಪಾರವಾಗಿದೆ. ಇಂಥ ಗಣ್ಯರ ಹೆಸರನ್ನು ಜಿಲ್ಲಾ ಕೇಂದ್ರದಲ್ಲಿನ ಹಳೆ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವವನ್ನು ಜಿಲ್ಲಾಡಳಿತ ಸಲ್ಲಿಸಿದ್ದು, ಈ ಕುರಿತು ಯಾವುದೇ ತಂಟೆ-ತಕಾರಾರು ಇದ್ದಲ್ಲಿ ಸಲ್ಲಿಸ ಬಹುದು ಎಂದು ಪೌರಾಯುಕ್ತರು ವಿವರಿಸಿದ್ದಾರೆ.

























