
ಕೋಲಾರ, ಸೆ. ೨೫: ಗ್ರಾಮೀಣ ಭಾಗದ ಮಹಿಳೆಯರು ಮತ್ತು ರೈತರ ಜೀವನೋಪಾಯವನ್ನು ಬಲಪಡಿಸಲು ಮತ್ತು ಆರ್ಥಿಕವಾಗಿ ಸಬಲಗೊಳಿಸಲು ’ವಿಬಿಜಿರಾಮ್‌ಜಿ’ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದು ಪಂಚಾಯತ್ ಸಹಾಯಕ ಯೋಜನಾಧಿಕಾರಿ ಎಸ್. ವೆಂಕಟಾಚಲಪತಿ ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಕೃಷಿ ಸಖಿಯರು, ಪಶು ಸಖಿಯರ ತರಬೇತಿ ಸಭೆಯಲ್ಲಿ ಅವರು ಮಾತನಾಡಿದರು. “ಗ್ರಾಮೀಣ ಮಟ್ಟದಲ್ಲಿ ಕೃಷಿ, ಪಶುಸಂಗೋಪನೆ ಮತ್ತು ಸ್ವ-ಉದ್ಯೋಗ ಚಟುವಟಿಕೆಗಳನ್ನು ಉತ್ತೇಜಿಸಲು ಸ್ವಸಹಾಯ ಸಂಘಗಳ ಪಾತ್ರ ಪ್ರಮುಖವಾಗಿದೆ. ಕೃಷಿ ಸಖಿಯರು ಮತ್ತು ಪಶು ಸಖಿಯರು ಸರ್ಕಾರದ ಯೋಜನೆಗಳನ್ನು ತಲುಪಿಸಲು ತಳಮಟ್ಟದಲ್ಲಿ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ವಿಬಿಜಿರಾಮ್‌ಜಿ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಯೂ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು.
ವಿಬಿಜಿರಾಮ್‌ಜಿ ಯೋಜನೆಯಡಿ ದಿನದ ಕೂಲಿ ದರವನ್ನು ರೂ ೩೮೨ ಕ್ಕೆ ಏರಿಸಲಾಗಿದೆ, ಕುಟುಂಬಕ್ಕೆ ೧೨೫ ದಿನಗಳ ಉದ್ಯೋಗ ಖಾತಿ ನೀಡಲಾಗುತ್ತಿದೆ. ಇದರಿಂದ ಒಂದು ಕುಟುಂಬವು ವರ್ಷಕ್ಕೆ ರೂ ೪೭,೭೫೦ ಗಳಿಸಬಹುದು.
ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ದನದ ಶೆಡ್, ಕುರಿ/ಮೇಕೆ ಶೆಡ್, ಕೋಳಿ ಶೆಡ್, ಹಂದಿ ಶೆಡ್, ಬಚ್ಚಲು ಗುಂಡಿ, ಕೊಳವೆಬಾವಿ ಮರುಪೂರಣ ಘಟಕ, ಗೊಬ್ಬರ ಘಟಕ, ಕೃಷಿ ಹೊಂಡ, ಟ್ರೆಂಚ್, ಎರೆಹುಳು ಗೊಬ್ಬರ ಘಟಕ, ಮಳೆನೀರು ಕೊಯ್ಲು, ಆಜೋಲ್ಲಾ ತೊಟ್ಟಿ ಸೇರಿದಂತೆ ತೋಟಗಾರಿಕೆ ಮತ್ತು ರೇಷ ಬೆಳೆಗೆ ಸಹಾಯಧನ ನೀಡಲಾಗುತ್ತದೆ. ಪ್ರತಿಯೊಬ್ಬ ಅರ್ಹ ಬಡ ಕುಟುಂಬವೂ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ತಮ್ಮ ಕಾಮಗಾರಿ ಹೆಸರನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ, ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು.
ಈ ಯೋಜನೆಯಡಿಯಲ್ಲಿ ಯಥಾ ಶಕ್ತಿ ಕೈಗೆಟುಕುವ ೩೭೫ ವಿವಿಧ ಕಾಮಗಾರಿಗಳು ಅನುಷ್ಠಾನಕ್ಕಾಗಿವೆ, ನಗರೋದ್ಯೋಗ ನೀಡುವ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಡಿಪಿಸಿ ಸತೀಶ್, ಡಿಐಇಸಿ ಆನಂದ್, ಎನ್.ಆರ್‌ಎಲ್.ಎಂ ಯೋಜನೆ ಡಿಎಂಐಎಸ್ ಸುಜಾತಾ, ಡಿ.ಎಂ ಅಕುಲ ಕಾವೇರಿ, ಖಾದರ್ ಸಾಬ್, ಜಿ.ಎಲ್.ಎಮ್. ಎನ್.ಆರ್.ಎಲ್.ಎಂ, ತಾಲ್ಲೂಕು ಮಟ್ಟದ ಟಿಪಿಎಂಗಳಾದಿ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಕೃಷಿ ಸಖಿಯರು, ಪಶು ಸಖಿಯರು, ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಉಪಸ್ಥಿತರಿದ್ದರು.

























