
ಬೆಂಗಳೂರು, ಮೇ ೨೩- ನಗರದ ಟೌನ್ಹಾಲ್ ಬಳಿ ನಾಳೆ ನಡೆಯಬೇಕಿದ್ದ ಕಾಕ್ರೋಚ್ ಜನತಾ ಪಾರ್ಟಿ ಬಹಿರಂಗ ಸಭೆಗೆ ಅನುಮತಿ ಕೊಡುವುದು ಅಥವಾ ಬಿಡುವುದು ಪೊಲೀಸರಿಗೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಒಂದು ಸಮಾವೇಶ ಮಾಡುತ್ತಾರೆ ಎಂದರೆ ಯಾವ ಉದ್ದೇಶಕ್ಕೆ ಮಾಡುತ್ತಿದ್ದಾರೆ, ಸಮಾವೇಶಕ್ಕೆ ಯಾರೆಲ್ಲಾ ಬರುತ್ತಿದ್ದಾರೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಾರೆ. ಅದು ಅವರ ಕರ್ತವ್ಯ ಎಂದು ಹೇಳಿದರು.
ಕಾಕ್ರೋಚ್ ಜನತಾ ಪಾರ್ಟಿ ಸಮಾವೇಶಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದರೆ ಏನಾದರೂ ಅಂಶಗಳು ಇರಬೇಕಲ್ಲ ಎಂದು ಅವರು ಪ್ರಶ್ನಿಸಿದರು.
ನಮ್ಮ ಪಕ್ಷ, ನಾಯಕರ ಬೆಂಬಲ ಬೇರೆ. ಪೊಲೀಸರ ಕೆಲಸ ಪೊಲೀಸರು ಮಾಡುತ್ತಾರೆ. ರಾಜಕಾರಣಿ ಮಾಡುವ ಕೆಲಸ ರಾಜಕಾರಣಿಗಳು ಮಾಡುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಹಾಗಾಗಿ ಅನುಮತಿ ಕೊಡುವುದು, ಬಿಡುವುದು ಪೊಲೀಸ್ ಅಧಿಕಾರಿಗಳಿಗೆ ಬಿಟ್ಟ ವಿಚಾರ ಎಂದರು.
ದರ್ಶನ್ ಆತ್ಮಹತ್ಯೆ ವದಂತಿ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರ ಬಗ್ಗೆ ನಾನು ಪೊಲೀಸ್ ಅಧಿಕಾರಿಗಳನ್ನು ಮೌಖಿಕವಾಗಿ ಕೇಳಿದಾಗ ಆ ರೀತಿಯ ಘಟನೆ ನಡೆದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತು ಇನ್ನೇನೂ ವಿಚಾರ ಇಲ್ಲ ಎಂದು ತಿಳಿಸಿದರು.
ಸಂಪುಟ ಪುನಾಚರನೆಗೂ ರಾಜ್ಯಸಭೆ, ಪರಿಷತ್ ಚುನಾವಣೆಗೂ ಸಂಬಂಧ ಇಲ್ಲ. ಅದರ ಪಾಡಿಗೆ ಅದು ನಡೆಯುತ್ತದೆ. ಅಭ್ಯರ್ಥಿಗಳ ಬಗ್ಗೆ ನಮ್ಮ ಹೈಕಮಾಂಡ್, ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ ಎಂದರು.
ಸಂಪುಟ ಪುನಾರಚನೆಗೆ ಶಾಸಕರು ಒತ್ತಾಯಿಸುವುದರಲ್ಲಿ ತಪ್ಪೇನಿಲ್ಲ. ಸಚಿವರಾಗಲೂ ಅವರಿಗೂ ಸಾಮರ್ಥ್ಯ ಇದೆ. ಆದರೆ ಸಂಪುಟದಲ್ಲಿ ಶೇ. ೧೫ ರಷ್ಟು ಮಾತ್ರ ಖಾತೆಗಳ ಭರ್ತಿ ಮಾಡಿಕೊಳ್ಳಬೇಕು ಎಂದಿದೆ. ಹಾಗಾಗಿ ಸಂಖ್ಯೆಗಳು ಕಡಿಮೆ ಇರುತ್ತವೆ ಎಂದ ಅವರು, ಕೆಲ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡುತ್ತಾರೆ ಎಂಬ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು. ಆ ಬಗ್ಗೆ ನಾನೇನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಖಾತೆ ಬದಲಾವಣೆಗೆ ಕೇಳಿಲ್ಲ
ನನಗೆ ನನ್ನ ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಗೃಹ ಖಾತೆಯಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿರುವ ತೃಪ್ತಿ ನನಗಿದೆ. ಇದುವರೆಗೂ ನಾನು ೮ ವರ್ಷಗಳ ಕಾಲ ಗೃಹ ಇಲಾಖೆ ನಿಭಾಯಿಸಿದ್ದೇನೆ. ನನಗೇನೂ ಖಾತೆ ಬಗ್ಗೆ ಬೇಸರ ಇಲ್ಲ. ಗೃಹ ಖಾತೆ ಜತೆಗೆ ಇನ್ನೊಂದು ಬೇರೆ ಖಾತೆ ನೀಡಿದರೂ ನಿಭಾಯಿಸುತ್ತೇನೆ ಎಂದರು.
ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಏನು ಕೊಟ್ಟರೂ ನಾನು ನಿಭಾಯಿಸುತ್ತೇನೆ, ಆ ಸಾಮರ್ಥ್ಯ ನನಗೆ ಇದೆ ಎಂದು ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದರು.
ಬಕ್ರೀದ್ ಹಬ್ಬಗೆ ರಕ್ಷಣೆ ಕೋರಿ ವಕ್ಭ್ ಬೋರ್ಡ್ ಮುಖ್ಯಸ್ಥರು ಪತ್ರ ಬರೆದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೊಡ್ಡ ದೊಡ್ಡ ಹಬ್ಬಗಳಾದಾಗ ಪೊಲೀಸರು ಎಚ್ಚರಿಕೆ ವಹಿಸುತ್ತಾರೆ. ಅದು ಅವರ ಕರ್ತವ್ಯ. ಇಂತಹ ಹಬ್ಬಗಳಿಗೆ ಮತ್ತಷ್ಟು ಹೆಚ್ಚುವರಿ ಎಚ್ಚರಿಕೆ ವಹಿಸಬೇಕು. ಆ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂದರು.
ವಕ್ಫ್ ಬೋರ್ಡ್ನವರಿಗೆ ಏನು ಆತಂಕ ಇದೆಯೋ ಗೊತ್ತಿಲ್ಲ, ಅವರು ಪತ್ರ ಬರೆದಿದ್ದರೆ ಅದಕ್ಕೆ ಯಾವ ರೀತಿ ಸ್ಪಂದಿಸಬೇಕೋ ಅದರಂತೆ ಪೊಲೀಸರು ಸ್ಪಂದಿಸುತ್ತಾರೆ ಎಂದು ಅವರು ಹೇಳಿದರು.
ಲಾಡ್ಲೆ ಮಶಾಕ್ ದರ್ಗಾ ಕೇಸ್ಗಳ ವಾಪಸ್ಗೆ ಬಿಜೆಪಿ, ಹಿಂದೂಪರ ಸಂಘಟನೆಗಳು ವಿರೋಧ ಮಾಡುವುದು ಅವರಿಗೆ ಬಿಟ್ಟ ವಿಚಾರ. ಎಲ್ಲರನ್ನೂ ಸರಿ ಸಮಾನವಾಗಿ ನೋಡಿಕೊಳ್ಳಬೇಕು ಎಂದು ಸಂವಿಧಾನದಲ್ಲಿದೆ. ಕಾಂಗ್ರೆಸ್ ಅದನ್ನೇ ಮಾಡುತ್ತಿದೆ. ಹೆಚ್ಚುವರಿಯಾಗಿ ಪಕ್ಷ ಏನನ್ನು ಮಾಡುತ್ತಿಲ್ಲ ಎಂದರು.
ಹಿಂದುಳಿದವರು, ತುಳಿತಕ್ಕೆ, ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಒಂದಿಷ್ಟು ಕಾರ್ಯಕ್ರಮ ಕೊಡುವುದು ಕಾಂಗ್ರೆಸ್ ಕೆಲಸ. ಇದೇನು ಹೊಸದಲ್ಲ, ೧೯೪೭ ರಿಂದಲೇ ಈ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.

























