
ಮುಂಬೈ,ಜು.೯: ಮಹಾರಾಷ್ಟ್ರದಾದ್ಯಂತ ಅಬ್ಬರಿಸುತ್ತಿರುವ ವರುಣನ ಆರ್ಭಟಕ್ಕೆ ವಾಣಿಜ್ಯ ನಗರಿ ಮುಂಬೈ ಮತ್ತು ಉಪನಗರಗಳು ಸಂಪೂರ್ಣ ತತ್ತರಿಸಿವೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮುಂಗಾರು ಮಳೆಯಿಂದಾಗಿ ನಗರದಾದ್ಯಂತ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ರೈಲು ಹಾಗೂ ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಜುಲೈ ಮೊದಲ ಎಂಟು ದಿನಗಳಲ್ಲೇ ಮುಂಬೈನಲ್ಲಿ ಬರೋಬ್ಬರಿ ೧,೧೦೦ ಮಿಮೀಗೂ ಅಧಿಕ ಮಳೆ ದಾಖಲಾಗಿದ್ದು, ಬುಧವಾರವೂ ಮಳೆಯ ಅಬ್ಬರ ಮುಂದುವರಿದಿದೆ. ಹವಾಮಾನದ ತೀವ್ರತೆಯನ್ನು ಗಮನಿಸಿದ ಭಾರತೀಯ ಹವಾಮಾನ ಇಲಾಖೆ (Iಒಆ), ನಗರಕ್ಕೆ ನೀಡಲಾಗಿದ್ದ ‘ಯೆಲ್ಲೋ ಅಲರ್ಟ್’ ಅನ್ನು ‘ಆರೆಂಜ್ ಅಲರ್ಟ್’ಗೆ ಬದಲಾಯಿಸಿದೆ.
ಭಾರಿ ಮಳೆ ಮತ್ತು ಕನಿಷ್ಠ ದೃಶ್ಯ ಗೋಚರತೆಯ ಕಾರಣದಿಂದಾಗಿ ಮುಂಬೈಗೆ ಆಗಮಿಸಬೇಕಿದ್ದ ೯ ವಿಮಾನಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸಮೀಪದ ಇತರೆ ವಿಮಾನ ನಿಲ್ದಾಣಗಳಿಗೆ ಯಶಸ್ವಿಯಾಗಿ ತಿರುಗಿಸಲಾಗಿದೆ. ಇನ್ನು ನಗರದ ಜೀವನಾಡಿಯಾಗಿರುವ ಸ್ಥಳೀಯ ಲೋಕಲ್ ರೈಲುಗಳು ಹಳಿಗಳ ಮೇಲೆ ನೀರು ನಿಂತಿದ್ದರಿಂದ ೨೫ ರಿಂದ ೩೦ ನಿಮಿಷ ತಡವಾಗಿ ಸಂಚರಿಸುತ್ತಿವೆ. ಉಲ್ಹಾಸ್ ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ನೇರಳ್ ಮತ್ತು ಕರ್ಜತ್ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ನಗರಕ್ಕೆ ಕುಡಿಯುವ ನೀರು ಪೂರೈಸುವ ವಿಹಾರ್ ಸರೋವರ ತುಂಬಿ ಹರಿದ ಬೆನ್ನಲ್ಲೇ, ತುಳಸಿ ಸರೋವರ ಕೂಡ ಭರ್ತಿಯಾಗಿ ಕೋಡಿ ಹರಿಯುತ್ತಿದೆ. ಇದು ಮುಂಬೈನಲ್ಲಿ ಸುರಿಯುತ್ತಿರುವ ಮಳೆಯ ಭೀಕರತೆಗೆ ಸಾಕ್ಷಿಯಾಗಿದೆ. ಬುಧವಾರ ಸಂಜೆಯ ವೇಳೆಗೆ ಸಾಂತಾಕ್ರೂಜ್‌ನಲ್ಲಿ ೩೨.೪ ಮಿಮೀ ಹಾಗೂ ನವಿ ಮುಂಬೈನ ಬೇಲಾಪುರದಲ್ಲಿ ೫೭ ಮಿಮೀ ಮಳೆ ದಾಖಲಾಗಿದೆ.
ಮುಂಬೈ ನಗರ, ಉಪನಗರ, ಠಾಣೆ, ಪಾಲ್ಘರ್ ಮತ್ತು ರಾಯಗಢ ಜಿಲ್ಲೆಗಳಲ್ಲಿ ಗುರುವಾರ ಮುಂಜಾನೆವರೆಗೂ ಆಕಸ್ಮಿಕ ಪ್ರವಾಹ ಉಂಟಾಗುವ ಮಧ್ಯಮ ಮಟ್ಟದ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೇ ಸತತ ಮಳೆಯಿಂದಾಗಿ ಭೂಮಿ ಸಂಪೂರ್ಣ ತೇವಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಮುಂದಿನ ೨೪ ಗಂಟೆಗಳಲ್ಲಿ ಮಳೆಯ ತೀವ್ರತೆ ಕೊಂಚ ಕಡಿಮೆಯಾಗುವ ಮುನ್ಸೂಚನೆ ಇದ್ದರೂ, ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರದಂತೆ ಮತ್ತು ಪ್ರವಾಹ ಪೀಡಿತ ರಸ್ತೆಗಳಿಂದ ದೂರವಿರುವಂತೆ ಸ್ಥಳೀಯ ಆಡಳಿತ ಮತ್ತು ಐಎಂಡಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.






























