Home Uncategorized ವಿದ್ಯುತ್ ಸಮಸ್ಯೆಯಿಂದ ಸಿರಿಗೇರಿಯಲ್ಲಿ ಕುಡಿಯುವ ನೀರಿನ ಕೊರತೆ.

ವಿದ್ಯುತ್ ಸಮಸ್ಯೆಯಿಂದ ಸಿರಿಗೇರಿಯಲ್ಲಿ ಕುಡಿಯುವ ನೀರಿನ ಕೊರತೆ.

ಸಂಜೆವಾಣಿ ವಾರ್ತೆ

ಸಿರಿಗೇರಿ ಜು.9. ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದಲ್ಲಿ ನಿರಂತರ ಕರೆಂಟ್ ಕೈ ಕೊಡುವ ಸಮಸ್ಯೆಯಿಂದಾಗಿ, ಸಾರ್ವಜನಿಕ ಕೊಳಾಯಿಗಳಿಗೆ ನೀರು ಬರದೆ ಸಮಸ್ಯೆ ತಲೆದೋರಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇಂದು ಸಿರಿಗೇರಿ ಗ್ರಾಮದ 1ನೇ ವಾರ್ಡ್ ನಾಗನಾಥೇಶ್ವರ ಪ್ರದೇಶದ ನಿವಾಸಿಗಳು 15 ದಿನದಿಂದ ತಮ್ಮ ವಾರ್ಡಿನಲ್ಲಿ ಸರಿಯಾಗಿ ನೀರು ಬರುತ್ತಿಲ್ಲವೆಂದು, ನೀರಿನ ಸಮಸ್ಯೆಯಾಗಿದೆ ಎಂದು, ಖಾಲಿ ಕೊಡಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿಗೆ ಬಂದು, ಪಿಡಿಓ ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರಿ ಪಿಡಿಓ ಎಂ.ಹುಸೇನ್ ಪೀರಸಾಬ್ ರವರು ನೀರ ಗಂಟಿಗಳನ್ನು ಕರೆದು ವಿಚಾರಿಸಿದಾಗ, ಸತತ 8- 10 ದಿನದಿಂದ ಹಗಲಿನ ಹೊತ್ತು ಕರೆಂಟ್ ಬಹಳ ಕೈಕೊಡುತ್ತಿದೆ. ಇದರಿಂದಾಗಿ ಟ್ಯಾಂಕ್ ಪೂರ್ಣ ತುಂಬಿಸಲು ಆಗುತ್ತಿಲ್ಲ ಸಂಗ್ರಹಣೆ ಆದ ಸ್ವಲ್ಪ ನೀರನ್ನು ಬಿಟ್ಟಾಗ ರಭಸ ಇಲ್ಲದೆ ಬರುವ ನೀರು ಒಂದು ಕಡೆ ಹೋದರೆ ಇನ್ನೊಂದು ಕಡೆ ಹೋಗುತ್ತಿಲ್ಲ. ಪದೇಪದೇ ಕರೆಂಟ್ ಹೋಗುತ್ತಿರುವುದರಿಂದ ಬೋರ್ಗಳಿಂದ ನೀರು ಪೂರೈಸಲು ಆಗುತ್ತಿಲ್ಲ ಎಂದು ತಿಳಿಸಿದರು. ಇದಕ್ಕೆ ವಾರ್ಡಿನ ಪ್ರಮುಖರು, ಸಾರ್ವಜನಿಕರು ಧ್ವನಿಗೂಡಿಸಿ ಗಾಳಿ ನೆಪವಡ್ಡಿ ಪದೇಪದೇ ಕರೆಂಟು ತೆಗೆಯಲಾಗುತ್ತಿದೆ. ಒಂದೆರಡು ತಾಸು ಸಹ ಕರೆಂಟ್ ಇರುವುದಿಲ್ಲ, ರಾತ್ರಿ ಹೊತ್ತು ಮಾತ್ರ ಕೆಲ ಗಂಟೆಗಳ ಕರೆಂಟು ಇರುತ್ತದೆ. ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಕೇಳಲು ಫೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ, ಇದು ಹೀಗೆ ಮುಂದುವರೆದರೆ ಸಿರಿಗೇರಿ ಕ್ರಾಸ್ ಕರೆಂಟ್ ಆಫೀಸ್ ಮುಂದೆ ಖಾಲಿ ಕೊಡ ಇಟ್ಟು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪಿಡಿಒ ರವರು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ಕುಡಿವ ನೀರಿನ ಸಮಸ್ಯೆ ಗ್ರಾಮದಲ್ಲಿ ಹೆಚ್ಚುತ್ತಿದ್ದು ಸಮರ್ಪಕ ಕರೆಂಟ್ ನೀಡುವಂತೆ ಒತ್ತಾಯ ಪಡಿಸಿದರು.