
ಬೆಂಗಳೂರು, ಜು. ೯:ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ನಗರ ಪಾಲಿಕೆಗಳ ಚುನಾವಣೆಗೆ ಮತ್ತೆ ಅನಿಶ್ಚಿತತೆ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಆಗಸ್ಟ್ ೩೦ರೊಳಗೆ ಚುನಾವಣೆ ನಡೆಸುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಕಾಲಾವಕಾಶ ಕೋರಿ ಅಫಿಡವಿಟ್ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿ ನಗರಾಭಿವೃದ್ಧಿ ಇಲಾಖೆಯ ಮೂಲಗಳಿಂದ ಸಂಜೆವಾಣಿ ಗೆ ತಿಳಿದುಬಂದಿದೆ.
ಮಾಹಿತಿಯ ಪ್ರಕಾರ,
ಸರ್ಕಾರದ ಪರ ವಾಸಿಸುತ್ತಿದ್ದ ವಕೀಲರನ್ನು ಬದಲಾಯಿಸಿ ಬೇರೊಬ್ಬ ಪ್ರಖ್ಯಾತ ವಕೀಲರ ಮೂಲಕ ಇದೇ೧೩ ರಂದು ಸುಪ್ರೀಂ ಕೋರ್ಟ್ ಗೆ
ರಾಜ್ಯ ಚುನಾವಣಾ ಆಯೋಗದ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸರ್ಕಾರ ಚಿಂತನೆ ನಡೆಸಿದೆ. ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿಯ ಬಹುಪಾಲು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIಖ) ಕಾರ್ಯದಲ್ಲಿ ನಿರತರಾಗಿರುವುದರಿಂದ ಚುನಾವಣಾ ಸಿದ್ಧತೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸರ್ಕಾರದ ಪ್ರಮುಖ ವಾದವಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಚುನಾವಣೆ ನಡೆಸಲು ಬೇಕಾದಷ್ಟು ಸಿಬ್ಬಂದಿ ಲಭ್ಯವಿಲ್ಲ. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಚುನಾವಣಾ ಪೂರ್ವ ಸಿದ್ಧತೆ ಆರಂಭಿಸಲು ಸರ್ಕಾರ ನಿರ್ಧರಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸುಪ್ರೀಂ ಕೋರ್ಟ್ ಮತ್ತೆ ಅರ್ಜಿ ಸಲ್ಲಿಸಬರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಅಪಿಡೆವಿಟ್ ಸಲ್ಲಿಕೆಗೆ ಸರ್ಕಾರ ಮುಂದಾಗಿದೆ.
ಒಂದು ವೇಳೆ ಸುಪ್ರೀಂ ಕೋರ್ಟ್ ಅರ್ಜಿಗೆ ಛೀಮಾರಿ ಹಾಕಿ ಅರ್ಜಿ ವಜಾಗೊಳಿಸಿದರೆ ಜುಲೈ ೧೫ ರ ನಂತರ ಜಿಬಿಎ ಚುನಾವಣೆ ಷೋಷಣೆ ಅಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
ಈ ಹಿಂದೆ ಮೇ ೨೦೨೬ರಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಜಿಬಿಎ ಹಾಗೂ ಐದು ನಗರ ಪಾಲಿಕೆಗಳ ಚುನಾವಣೆಗಳನ್ನು ಆಗಸ್ಟ್ ೩೦ರೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಪ್ರಸ್ತುತ ಆಡಳಿತಾತ್ಮಕ ಹಾಗೂ ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ಆ ಗಡುವು ಪಾಲಿಸುವುದು ಸವಾಲಾಗಿದೆ ಎಂದು ಸರ್ಕಾರ ವಾದ ಮಂಡಿಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ಅರ್ಜಿಗೆ ಸುಪ್ರೀಂ ಕೋರ್ಟ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಒಂದು ವೇಳೆ ಕಾಲಾವಕಾಶ ನೀಡಿದರೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಮತದಾರರು ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇನ್ನೂ ಕೆಲವು ತಿಂಗಳು ಕಾಯಬೇಕಾಗುವ ಸಾಧ್ಯತೆ ಇದೆ.






























