
ಬೆಂಗಳೂರು. ಮೇ ೧- ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಮಹಾಮಳೆಯ ಅವಾಂತರಗಳು ದಿನೇದಿನೇ ಗಂಭೀರವಾಗುತ್ತಿವೆ. ನಗರದ ಹೃದಯಭಾಗದಲ್ಲೇ ಭಾರೀ ಅಪಾಯಕರ ಘಟನೆ ಬೆಳಕಿಗೆ ಬಂದಿದೆ. ವಿಧಾನಸೌಧ ಸಮೀಪದಲ್ಲೇ ರಸ್ತೆ ಏಕಾಏಕಿ ಕುಸಿದು ಆತಂಕ ಸೃಷ್ಟಿಸಿದೆ.
ಎಂಎಸ್ ಬಿಲ್ಡಿಂಗ್ ಮುಂಭಾಗದಲ್ಲಿ ಸುಮಾರು ಆರೇಳು ಅಡಿ ಆಳಕ್ಕೆ ರಸ್ತೆ ಬಾಯ್ತೆರೆದುಕೊಂಡಿದೆ. ಸ್ಥಳದಲ್ಲೇ ನಿಂತಿದ್ದ ಪೊಲೀಸ್ ಜೀಪ್ ಗುಂಡಿಗೆ ಸಿಲುಕಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇತ್ತೀಚೆಗೆ ಭೂಗತ ಪೈಪ್ ಅಳವಡಿಕೆಗಾಗಿ ಅಗೆದು ಮರುನಿರ್ಮಾಣ ಮಾಡಲಾಗಿದ್ದ ರಸ್ತೆಯೇ ಕುಸಿದಿದೆ. ನಿರಂತರ ಮಳೆಯಿಂದ ರಸ್ತೆ ತೇವಗೊಂಡು, ಒಳಭಾಗ ದುರ್ಬಲಗೊಂಡ ಹಿನ್ನೆಲೆ ಈ ಕುಸಿತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳದಲ್ಲಿ ನೀರು ನಿಂತಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಭೀತಿ ಇದೆ. ಟ್ರಾಫಿಕ್ ಪೊಲೀಸರು ಹಾಗೂ ಜಿಬಿಎ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸುತ್ತಮುತ್ತ ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನು ನಿಯಂತ್ರಿಸಲಾಗಿದೆ.
ನಗರದಲ್ಲಿ ಮಳೆ ಹೆಚ್ಚಾದಂತೆ ಇಂತಹ ರಸ್ತೆ ಕುಸಿತ ಘಟನೆಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕೂಡ ಪ್ರಶ್ನೆಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ: ಮಳೆಗಾಲದ ನಡುವೆ ಮೂಲಸೌಕರ್ಯಗಳ ಸ್ಥಿತಿ ಮತ್ತೊಮ್ಮೆ ಬಯಲಾಗಿದ್ದು, ತುರ್ತು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.






















