Home ಜಿಲ್ಲೆ ಕಲಬುರಗಿ ಬಿಜೆಪಿಯ ಟೀಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಮಾರುತ್ತರ

ಬಿಜೆಪಿಯ ಟೀಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಮಾರುತ್ತರ

ಕಲಬುರಗಿ,ಏ.24-ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎನ್ನುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೊತೆಗೆ ಜಿಲ್ಲೆಯ ಮಕ್ಕಳಿಗೆ ಅವಮಾನವಾಗುವ ರೀತಿಯಲ್ಲಿ ಟ್ವಿಟ್ ಮಾಡಿ ಟೀಕಿಸಿದ್ದ ಬಿಜೆಪಿಗೆ ಖರ್ಗೆ ಟ್ವಿಟ್ ಮೂಲಕ ಮಾರುತ್ತರ ನೀಡಿದ್ದು ವಿದ್ಯಾರ್ಥಿಗಳ ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿರುವ ಬಿಜೆಪಿ, ಅವರ ಆತ್ಮಸ್ಥೈರ್ಯವನ್ನು, ಆತ್ಮವಿಶ್ವಾಸವನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ ನಿಮಗೆ ಸಮಸ್ಯೆ ಇದ್ದರೆ ನನ್ನನ್ನು ನಿಂದಿಸಿ, ಕಲಬುರಗಿಯ ಮಕ್ಕಳನ್ನು ಅಪಹಾಸ್ಯ ಮಾಡುತ್ತಿರುವುದೇಕೆ ? ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯ ಶೇಕಡಾವಾರು ಫಲಿತಾಂಶ 85% ಇರಬಹುದು, ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ, ರಾಜ್ಯದಲ್ಲೂ ಮತ್ತು ಕಲಬುರಗಿ ಜಿಲ್ಲೆಯಲ್ಲೂ, ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಮಾಡಿಕೊಳ್ಳುವ ಶಕ್ತಿ ನಮ್ಮ ಜಿಲ್ಲೆಯ ಮಕ್ಕಳಲ್ಲಿದೆ, ಮತ್ತು ಅದು ಸಾಧ್ಯವಾಗುತ್ತದೆ ಕೂಡ. ಆದರೆ ಪ್ರತಿ ಬಾರಿಯೂ ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸುತ್ತಿರುವ ಬಿಜೆಪಿ ರಾಜಕೀಯ ದಿವಾಳಿತನದೊಂದಿಗೆ ನೈತಿಕ ಪ್ರಜ್ಞೆಯೂ ದಿವಾಳಿಯಾಗಿರುವುದನ್ನು ನಿರೂಪಿಸುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿನ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಮಕ್ಕಳಿಗೂ “ದಡ್ಡರು” ಎಂಬ ಹಣೆಪಟ್ಟಿಯನ್ನು ಬಿಜೆಪಿ ಕಟ್ಟುತ್ತಿದೆಯೇ ? ಜಿಲ್ಲೆಯ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರುವಂತಹ ಮಾತುಗಳನ್ನಾಡುತ್ತಿರುವ ಬಿಜೆಪಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇಲ್ಲದಿರುವುದು ನಾಡಿನ ದುರಂತ. ಕಲಬುರಗಿ ಜಿಲ್ಲೆಯ ಮಕ್ಕಳ ಶ್ರಮವನ್ನು, ಅವರ ಬೌದ್ಧಿಕ ಸಾಮಥ್ರ್ಯವನ್ನು ಅವಮಾನಿಸುವ, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.