
ಬೆಂಗಳೂರು, ಸೆ. ೨- ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಅಗತ್ಯವಿರುವ ಶಾಸನಬದ್ಧ ತಾಂತ್ರಿಕ ಅನುಮೋದನೆಗಳನ್ನು ಶೀಘ್ರವಾಗಿ ಒದಗಿಸುವಂತೆ ಒತ್ತಾಯಿಸಿ, ಜಲಸಂಪನ್ಮೂಲ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಇಂದು ನವದೆಹಲಿಯಲ್ಲಿ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ಇಂದು ಸಿ ಡಬ್ಲ್ಯೂ ಸಿ ಅಧ್ಯಕ್ಷರಾದ ಅನುಪಮ್ ಪ್ರಸಾದ್ ಅವರೊಂದಿಗೆ ಮಹತ್ವದ ಸಭೆ ನಡೆಸಿತು.
ಈ ಉನ್ನತ ಮಟ್ಟದ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಕುಲಕರ್ಣಿ, ಮುಖ್ಯ ಎಂಜಿನಿಯರ್ ಮಹೇಶ್ ಹಾಗೂ ಸಿಡಬ್ಲ್ಯೂಸಿಯ ನೀರು ಯೋಜನೆ ಮತ್ತು ಯೋಜನಾ ವಿಭಾಗದ ಸದಸ್ಯರಾದ ಯೋಗೇಶ್ ಪೈತಾಂಕರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿ ಕುರಿತು ಕೇಂದ್ರ ಜಲ ಆಯೋಗವು ಈ ಹಿಂದೆ ವ್ಯಕ್ತಪಡಿಸಿದ್ದ ವೀಕ್ಷಣೆಗಳು ಹಾಗೂ ತಾಂತ್ರಿಕ ಅಂಶಗಳಿಗೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಅನುಸರಣಾ ವರದಿಯನ್ನು ಸಚಿವರು ಆಯೋಗದ ಮುಂದಿಟ್ಟು ವಿಸ್ತೃತವಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ವಾಸ್ತವಿಕ ಚಿತ್ರಣ ಹಾಗೂ ತಾಂತ್ರಿಕ ಸ್ಪಷ್ಟತೆಗಳ ಕುರಿತು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೆ, ಇಲಾಖೆಯ ವತಿಯಿಂದ ಅಗತ್ಯವಿರುವ ಹೆಚ್ಚುವರಿ ತಾಂತ್ರಿಕ ಸ್ಪಷ್ಟೀಕರಣಗಳನ್ನು ಸಮರ್ಥವಾಗಿ ಒದಗಿಸಿ ಯೋಜನೆಯ ತ್ವರಿತ ಮುನ್ನಡೆಗೆ ಕೇಂದ್ರ ಜಲ ಆಯೋಗವು ಸಂಪೂರ್ಣ ಸಹಕಾರ ನೀಡಬೇಕೆಂದು ಸಚಿವರು ಕೋರಿದರು.
ವಿಶೇಷವಾಗಿ ಪ್ರಸ್ತುತ ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆಯಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮೇಕೆದಾಟು ಯೋಜನೆಯ ಅನಿವಾರ್ಯತೆಯನ್ನು ಸಚಿವರು ಬಲವಾಗಿ ಪ್ರತಿಪಾದಿಸಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಬೆಂಗಳೂರು ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ದಾಹ ತಣಿಯುವುದರ ಜೊತೆಗೆ ಜಲವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ, ಬರಗಾಲದ ಸಂಕಷ್ಟದ ವರ್ಷಗಳಲ್ಲಿ ತಮಿಳುನಾಡಿಗೆ ನಿಗದಿತ ನೀರನ್ನು ನಿಯಮಿತವಾಗಿ ಹರಿಸಲು ಈ ಸಮತೋಲನ ಜಲಾಶಯವು ಎರಡೂ ರಾಜ್ಯಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂದು ವಿವರಿಸಿದರು. ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬಲವಾದ ರಾಜಕೀಯ ಬದ್ಧತೆಯನ್ನು ಹೊಂದಿದ್ದು, ತಾಂತ್ರಿಕ ಪರಿಶೀಲನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಆದಷ್ಟು ಬೇಗ ಯೋಜನೆಗೆ ಹಸಿರು ನಿಶಾನೆ ತೋರಬೇಕೆಂದು ನಿಯೋಗವು ಸಿಡಬ್ಲ್ಯೂಸಿ ಅಧ್ಯಕ್ಷರನ್ನು ಒತ್ತಾಯಿಸಿತು.































