
ಕಲಬುರಗಿ,ಅ.7-ನಗರದ ಡಬರಾಬಾದ ಆಶ್ರಯ ಕಾಲೋನಿ (ಕೃಷ್ಣಾ ಕಾಲೋನಿ)ಯಲ್ಲಿ ಜೂಜಾಟವಾಡುತ್ತಿದ್ದ ನಾಲ್ವರನ್ನು ಸಿಸಿಬಿ ಘಟಕದ ಪೊಲೀಸರು ಮತ್ತು ಶಿವಾಜಿ ನಗರದ ಅಂಬಾ ಭವಾನಿ ದೇವಸ್ಥಾನ ಹಿಂದುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಚೌಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಡಬರಾಬಾದ ಆಶ್ರಯ ಕಾಲೋನಿ (ಕೃಷ್ಣಾ ಕಾಲೋನಿ)ಯ ಹಾಳು ಬಿದ್ದ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜೆಸ್ ಮತ್ತು ಸಿಬ್ಬಂದಿಗಳಾದ ಮೃತ್ಯುಂಜಯ, ಅಶೋಕ ಕಟಕೆ, ನಾಗೇಂದ್ರ, ನಾಗರಾಜ, ಪ್ರದೀಪ್ ಮತ್ತು ಸುನೀಲಕುಮಾರ ಅವರು ದಾಳಿ ನಡೆಸಿ ಮಹೇಬೂಬ್, ಮುಸ್ತಾಕ್, ಮಹ್ಮದ್ ಅಹೆಮದ್ ಮತ್ತು ಪ್ರಕಾಶ್ ನಾಗೋಬಾ ಎಂಬುವವರನ್ನು ಬಂಧಿಸಿ 8,570 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ: ಇಬ್ಬರ ಬಂಧನ
ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾಜಿ ನಗರದ ಅಂಬಾ ಭವಾನಿ ದೇವಸ್ಥಾನದ ಹಿಂದುಗಡೆಯ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆಯ ಎಎಸ್‍ಐ ಥಾವರು, ಸಿಬ್ಬಂದಿಗಳಾದ ಶಿವಾನಂದ, ಶಿವಶರಣಪ್ಪ ಅವರು ದಾಳಿ ನಡೆಸಿ ಶಿವಾಜಿ ನಗರದ ಸುನೀಲ ಬಸುತಿಕರ ಎಂಬಾತನನ್ನು ಬಂಧಿಸಿ 1120 ರೂ.ನಗದು, ಅನಿಲಕುಮಾರ ಸಲಗರ ಎಂಬಾತನನ್ನು ಬಂಧಿಸಿ 1250 ರೂ.ನಗದು, ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.























