Home ಕ್ರೈಂ ಸುದ್ದಿಗಳು ಮೋರೆ ಪ್ಲಾಟ್‍ನಲ್ಲಿ ಭೀಕರ ಅಗ್ನಿ ಅವಘಡ;1 ಕೋಟಿಗೂ ಅಧಿಕ ನಷ್ಟ

ಮೋರೆ ಪ್ಲಾಟ್‍ನಲ್ಲಿ ಭೀಕರ ಅಗ್ನಿ ಅವಘಡ;1 ಕೋಟಿಗೂ ಅಧಿಕ ನಷ್ಟ

ಜಮಖಂಡಿ | ಜು. 12 : ನಗರದ ಮೋರೆ ಪ್ಲಾಟ್ ಪ್ರದೇಶದಲ್ಲಿರುವ ನ್ಯಾಯವಾದಿ ಪ್ರಕಾಶ ಚೌರಡ್ಡಿ ಅವರ ಮೂರು ಮಹಡಿಯ ನಿವಾಸದಲ್ಲಿ ಭಾನುವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು ?1 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹಾಗೂ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕಟ್ಟಡದ ವಿವಿಧ ಭಾಗಗಳಿಗೆ ವ್ಯಾಪಿಸಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಲವು ಗಂಟೆಗಳ ಕಾಲ ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಅಗ್ನಿ ಅವಘಡದ ವೇಳೆ ಮನೆಯ ಮೂರನೇ ಮಹಡಿಯ ಕೊಠಡಿಯಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕನನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.

ಮನೆ ಮಾಲೀಕರಾದ ನ್ಯಾಯವಾದಿ ಪ್ರಕಾಶ ಚೌರಡ್ಡಿ ಅವರು ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಇದೇ ಕಟ್ಟಡದಲ್ಲಿ ತಮ್ಮ ಕಚೇರಿಯನ್ನು ಆರಂಭಿಸಿದ್ದರೆಂದು ತಿಳಿದುಬಂದಿದೆ. ಮೂರು ಮಹಡಿಗಳ ಈ ಕಟ್ಟಡದಲ್ಲಿ ಪಿ.ಒ.ಪಿ. ಒಳಾಂಗಣ ವಿನ್ಯಾಸ ಹಾಗೂ ಸಾಗವಾನಿ ಮರದ ಕೆಲಸ ಹೆಚ್ಚಾಗಿ ಬಳಸಲಾಗಿದ್ದರಿಂದ ಬೆಂಕಿ ವೇಗವಾಗಿ ವ್ಯಾಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಇಲಾಖೆ ಹಾಗೂ ಪೆÇಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬೆಂಕಿಯ ಕಾರಣ ಮತ್ತು ನಷ್ಟದ ನಿಖರ ಪ್ರಮಾಣದ ಕುರಿತು ತನಿಖೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು

ಅಗ್ನಿಶಾಮಕ ಇಲಾಖೆ ಅಧಿಕಾರಿ ಎಂ.ಪಿ. ಹೂಗಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆನಂದ್ ಹಣಮರಟ್ಟಿ, ವಿಲಾಸ್ ಇಮ್ಮಾನಂದ, ತಿಪ್ಪಣ್ಣ ಬಂಡಾರಿ, ಶ್ರೀಧರ ಮಾಲಶೆಟ್ಟಿ, ಕುಮಾರ ದೊಡ್ಡಮನಿ, ಬಸವರಾಜ ರೊಳ್ಳಿ, ದಾನಯ್ಯ ಗಣಾಚಾರಿ, ಶ್ರವಣಕುಮಾರ ಹಾಗೂ ಪೆÇಲೀಸ್ ಇಲಾಖೆಯ ಶೇಖರ್ ನಾಯಕ್ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಕಾರ್ಮಿಕನನ್ನು ಸುರಕ್ಷಿತವಾಗಿ ರಕ್ಷಿಸಿದರು.