Home ಜಿಲ್ಲೆ ತುಮಕೂರು ತೆರೆದ ಮನೆ ಕಾರ್ಯಕ್ರಮದಡಿ ಯುವಜನರ ಕ್ಷೇತ್ರ ಭೇಟಿ

ತೆರೆದ ಮನೆ ಕಾರ್ಯಕ್ರಮದಡಿ ಯುವಜನರ ಕ್ಷೇತ್ರ ಭೇಟಿ

ಸಿರಾ, ಮೇ ೧೨- ತಾಲ್ಲೂಕಿನ ನವ್ಯ ದಿಶ ಸಂಸ್ಥೆಯ ಯುವ ಚಾವಡಿ ಕಾರ್ಯಕ್ರಮದ ಯೂತ್ ರಿಸೋರ್ಸ್ ಹಬ್ ನ ಹದಿಹರೆಯದವರ ಮತ್ತು ಯುವಜನರಿಗೆ ಕಳ್ಳಂಬೆಳ್ಳ ಪೋಲಿಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಪೋಲಿಸ್ ಠಾಣೆಯ ಎ.ಎಸ್.ಐ ಶ್ರೀನಿವಾಸ್ ರವರು ದೂರು ದಾಖಲಿಸುವ ಬಗ್ಗೆ, ಎಫ್.ಐ.ಆರ್. ಪೋಕ್ಸೋ ಪ್ರಕರಣಗಳ ಬಗ್ಗೆ ಹಾಗೂ ಪೋಲಿಸ್ ಠಾಣೆಯ ಮಹತ್ವ, ಅದರ ಕಾರ್ಯವೈಖರಿ ಹಾಗೂ ಸಾಮಾಜಿಕ ಜಾಲತಾಣಗಳಿಂದ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಹಾಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗರೂಕರಾಗಿರಬೇಕು ಎಂದು ಸಂವಾದ ನಡೆಸಿದರು.


ಪ್ರಸ್ತುತ ಹದಿಹರೆಯದವರ ರಕ್ಷಣೆಯಲ್ಲಿ ಪೋಲಿಸ್ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದು ಅಗತ್ಯವಿದೆ. ಹಾಗೆ ಹದಿಹರೆಯದವರು ತಮ್ಮ ರಕ್ಷಣೆಗೆ ತೊಂದರೆಯಾದಾಗ ನಿರ್ಭೀತಿಯಿಂದ ಪೋಲಿಸ್ ಇಲಾಖೆಯ ರಕ್ಷಣೆ ಪಡೆಯಬಹುದು ಎಂದು ನವ್ಯದಿಶ ಸಂಸ್ಥೆಯ ಅಶ್ವಿನಿ ತಿಳಿಸಿದರು.


ಭೇಟಿಯಲ್ಲಿ ಯುವಜನರು ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊತ್ತಿರುವಂತ ಯುವಜನರು ಅವರ ಕೆಲಸಗಳು, ಪರೀಕ್ಷೆಗಳ ಮಾಹಿತಿ ಕುರಿತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.


ಈ ಸಂದರ್ಭದಲ್ಲಿ ನವ್ಯದಿಶ ಸಂಸ್ಥೆಯ ತ್ರಿವೇಣಿ, ಯೂಥ್ ರಿಸೋರ್ಸ್ ಹಬ್ ನ ಹದಿಹರೆಯದವರು, ಯುವಜನರು ಉಪಸ್ಥಿತರಿದ್ದರು.