
ಅಥಣಿ :ಮೇ.೨:ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು. ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿ ದೇಶ ಕಟ್ಟುವ ಕಾರ್ಮಿಕ ವರ್ಗದ ಬದುಕು ಹಸನಾಗಬೇಕು. ಕಾರ್ಮಿಕರ ಮಕ್ಕಳು ಕೇವಲ ಕಾರ್ಮಿಕರಾಗಿ ಉಳಿಯದೆ. ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದ ಶಿವಯೋಗಿ ವೃತ್ತದಲ್ಲಿ ಅಥಣಿ ತಾಲೂಕು ಕಟ್ಟಡ ನಿರ್ಮಾಣ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಮಿಕರು ಬಸವಣ್ಣನವರು ನುಡಿದಂತೆ ‘ಕಾಯಕವೇ ಕೈಲಾಸ’ ತತ್ವ ಕಾರ್ಮಿಕರಿಗೆ ಸಲ್ಲುತ್ತದೆ. ಕಾರ್ಮಿಕರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅಥಣಿಯಲ್ಲಿ ೮ ಎಕರೆ ಜಾಗದಲ್ಲಿ ೩೬ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಈ ವಸತಿ ಶಾಲೆಯಲ್ಲಿ ಪಿಯುಸಿ ವರೆಗೆ ಮಾತ್ರವಲ್ಲದೆ ಸಂಪೂರ್ಣ ಉನ್ನತ ಶಿಕ್ಷಣ ಸಿಗಬೇಕು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವದು ಎಂದರು.
ಶಿಕ್ಷಣ ಇಲ್ಲದಿದ್ದರೆ ಬದುಕು ಶೂನ್ಯ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಎಂಬುದು ಹುಲಿ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು, ಈ ನಿಟ್ಟಿನಲ್ಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಮನವಿ ಮಾಡಿದರು.
ಸಮಾಜದ ಬೆನ್ನೆಲು ಬಾಗಿರುವ ಕಾರ್ಮಿಕರು ಗೌರವಯುತ ಜೀವನ ನಡೆಸಲು ಪೂರಕವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾರ್ಮಿಕ ಇಲಾಖೆ ಕಾರ್ಮಿಕರ ಬದುಕಿಗೆ ಆಧಾರ ಸ್ಥoಭವಾಗಿ ಅವರ ಬದುಕಿಗೆ ಬೆಳಕು ತರುತ್ತಿದೆ. ಕಾರ್ಮಿಕ ಸಚಿವ ಸಂತೋಷ ಲಾಡ ಅವರು ಕಾರ್ಮಿಕ ಖಾತೆಯ ಮಂತ್ರಿಗಳಾಗಿ ತುಂಬಾ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಲಾಡ್ ಅವರು ಕಾರ್ಮಿಕರ ಬದುಕಿಗೆ ಬೆಳಕು ನೀಡಿದ ವ್ಯಕ್ತಿ ಎಂದು ಶ್ಲಾಘಿಸಿದರು. ಜೊತೆಗೆ ಕಾರ್ಮಿಕರು ಕಾಯಕದಲ್ಲಿ ಸಂತೋಷ ಕಂಡವರು. ಜನತೆ ಇಂದು ಪ್ರತಿಯೊಬ್ಬ ಸುಖವಾಗಿ ಇರಬೇಕಾದರೆ ಅದರ ಹಿಂದೆ ಕಾರ್ಮಿಕರ ಶ್ರಮ ತುಂಬಾ ಇದೆ. ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಅವರು ಕಾರ್ಮಿಕರಾಗಿ ಮುಂದುವರಿಯದAತೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ನಮ್ಮ ಸರಕಾರ ಮಾಡುತ್ತಿದೆ. ಹೀಗಾಗಿ ಕಾರ್ಮಿಕರ ಮಕ್ಕಳಿಗೆ ೩೬ ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ಅಸಂಘಟಿತ ಕಾರ್ಮಿಕರ ಸಂಘದ ಕಟ್ಟಡಕ್ಕಾಗಿ ಜಾಗ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಾಗ ಮಂಜೂರಾದ ತಕ್ಷಣ ಶಾಸಕರ ಅನುದಾನದಡಿ ೧೦ ಲಕ್ಷ ಅನುದಾನ ನೀಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಮಿಕ ಇಲಾಖೆಯ ತಾಲೂಕಾ ಕಾರ್ಮಿಕ ನಿರೀಕ್ಷಕಿ ಭುವನೇಶ್ವರಿ ಢಾಲೆ ಮಾತನಾಡಿ ಕಾರ್ಮಿಕ ದಿನಾಚರಣೆ ಹಿನ್ನೆಲೆ ಹಾಗೂ ಮಹತ್ವ ವಿವರಿಸಿ ಮೊದಲು ಕಾರ್ಮಿಕರು ೧೪ ಗಂಟೆ ಕೆಲಸ ಮಾಡಬೇಕಾಗಿತ್ತು ಅದನ್ನು ಎಂಟು ಗಂಟೆಗೆ ಇಳಿಸಲಾಯಿತು. ಮಹಿಳೆಯರಿಗೆ ಹೆರಿಗೆ ರಜೆಯ ಜೊತೆಗೆ ಸರ್ಕಾರವು ಹಲವಾರು ಯೋಜನೆ ಜಾರಿಗೆ ತಂದಿದೆ. ಶೈಕ್ಷಣಿಕವಾಗಿ ಕಾರ್ಮಿಕರ ಮಕ್ಕಳಿಗೆ ಸ್ಕಾಲರಶೀಪ ಸೇರಿದಂತೆ ಅಫಘಾತ ವಿಮೆ, ಆರೋಗ್ಯ ವಿಮೆ, ಮುಪ್ಪಿನಲ್ಲಿ ವೃದ್ಯಾಪ ವೇತನ ಸೇರಿದಂತೆ ಹಲವಾರು ಯೋಜನೆಗಳ ಲಾಭ ಪಡೆಯಬೇಕು ಎಂದು ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶೆಟ್ಟರ್ ಮಠದ ಮರುಳಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡುತ್ತಾ ದಿನನಿತ್ಯ ಶ್ರಮವಹಿಸುವ ಶ್ರಮಜೀವಿಗಳ ಬದುಕು ಹಸನಾಗಲಿ ಎಂದು ಹಾರೈಸಿದರು.
“ಕಾರ್ಮಿಕರ ಮಕ್ಕಳಿಗೆ ಸೈಕಲ್ ನೀಡಿದ ಗುತ್ತಿಗೆದಾರ ರಾಜು ಆಳಬಾಳ”
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ ಗೌರವಿಸಲಾಯಿತು. ಉದ್ಯಮಿ ರಾಜು ಅಲಬಾಳ ಅವರು ತಾಲೂಕಾ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕಾರ್ಮಿಕರ ಮಕ್ಕಳಿಗೆ ವೈಯಕ್ತಿಕವಾಗಿ ಸೈಕಲ್‌ಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಮಾತನಾಡಿದರು. ಗುತ್ತಿಗೆದಾರ ರಾಜು ಅಲಬಾಳ, ಅಥಣಿ ತಾಲೂಕಾ ಅಸಂಘಟಿತ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್ ನಿಕ್ಕಂ, ಉಪಾಧ್ಯಕ್ಷ ಕೇದಾರಿ ಹಳದಮಳ, ಚಂದ್ರಶೇಖರ ಐಗಳಿ, ಸುರೇಶ ಮೊಪಗಾರ, ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಭುವನೇಶ್ವರಿ ಢಾಲೆ, ಹಾಗೂ ತಾಲೂಕಾ ಕಾರ್ಮಿಕ ಸಂಘದ ಪದಾಧಿಕಾರಿಗಳು ಮತ್ತು ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


























