Home ಜಿಲ್ಲೆ ತುಮಕೂರು ಸಚಿವ ಸುಧಾಕರ್‌ಗೆ ಅಂತಿಮ ನಮನ

ಸಚಿವ ಸುಧಾಕರ್‌ಗೆ ಅಂತಿಮ ನಮನ

ತುಮಕೂರು, ಮೇ ೧೧– ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಪಾರ್ಥೀವ ಶರೀರವನ್ನು ಸ್ವಕ್ಷೇತ್ರ ಹಿರಿಯೂರಿಗೆ ಕೊಂಡೊಯ್ಯುವ ಮಾರ್ಗಮಧ್ಯೆ ನಗರದ ಬಟವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ- ೪೮ರಲ್ಲಿ ಅರ್ಧತಾಸು ನಿಲ್ಲಿಸಿ ತುಮಕೂರಿನ ಅವರ ಬಂಧುಗಳು, ಜೈನ ಸಮಾಜದ ಮುಖಂಡರು, ಗಣ್ಯರು, ಸಾರ್ವಜನಿಕರು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ನಗರದ ಬಟವಾಡಿಗೆ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ, ಜೈನ ಸಮಾಜದ ಜಿಲ್ಲಾ ಮುಖಂಡರಾದ ನಾಗರಾಜಜೈನ್, ಆರ್.ಎ.ಸುರೇಶ್‌ಕುಮಾರ್, ಚಂದ್ರಕೀರ್ತಿ, ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಗೋವಿಂರಾಜು, ಉಪಾಧ್ಯಕ್ಷ ಕೆ.ಎಸ್. ರಾಮಮೂರ್ತಿ, ಚಿಂತನಾ ಬಳಗದ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸು, ತೇಜೇಶ್, ರಾಜೇಶ್ ದೊಡ್ಮನೆ ಸೇರಿದಂತೆ ಹಲವರು ಹೂಗುಚ್ಚ ಅರ್ಪಿಸಿ ಅಗಲಿದ ನಾಯಕನಿಗೆ ಅಂತಿಮ ವಿದಾಯ ಹೇಳಿದರು.

ಆಂಬ್ಯುಲೆನ್ಸ್ ನಲ್ಲಿ ಸುಧಾಕರ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿಟ್ಟು ಅಂತಿಮ ನಮನ ಸಲ್ಲಿಸಿದ ರಾಜಣ್ಣ ಅವರು ಅತ್ಯಾಪ್ತ ಸ್ನೇಹಿತನನ್ನು ನೆನೆದು ಭಾವುಕರಾದರು. ಸುಧಾಕರ್ ಅವರ ಹಿರಿಯ ಸಹೋದರ ತುಮಕೂರಿನ ಬೆಸಿಲ್ ಲೀಫ್ ಹೋಟೆಲ್ ಮಾಲೀಕ ಹಾಗೂ ಮಹಾಲಕ್ಷ್ಮಿ ಬಡಾವಣೆಯ ವೆಂಕಟೇಶ್ವರ ದೇವಾಲಯದ ಅಧ್ಯಕ್ಷ ಡಿ.ಎಸ್. ಕುಮಾರ್ ಅವರನ್ನು ಕೆ.ಎನ್. ರಾಜಣ್ಣನವರು ಸಂತೈಸಿದರು.