
ಯಾದಗಿರಿ:ಮೇ.೨೫: ಜಿಲ್ಲೆಯ ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯ ದೋರನಹಳ್ಳಿ ಪಟ್ಟಣದ ದಲಿತರ ಬಡಾವಣೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತ ಹಣಮಂತ ದೋರನಹಳ್ಳಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ನಿರಂತರವಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು. ಮಳೆಗಾಲದಲ್ಲಿ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಡುತ್ತಿದ್ದು, ಚರಂಡಿ ವ್ಯವಸ್ಥೆಯ ಕೊರತೆಯಿಂದ ಕೊಳಚೆ ನೀರು ಮನೆಗಳ ಮುಂದೆ ನಿಂತು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಹೇಳಿದರು.
“ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವೇ ಇಲ್ಲ. ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಸಾರ್ವಜನಿಕರು ಮೂಲಸೌಕರ್ಯಗಳ ಕೊರತೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕರಿಗೆ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದಾಗ, “ನನ್ನ ಪುತ್ರ ಸನ್ನಿಗೌಡರನ್ನು ಭೇಟಿ ಮಾಡಿ” ಎಂದು ಹೇಳಿ ಜವಾಬ್ದಾರಿಯಿಂದ ದೂರ ಸರಿಯುತ್ತಾರೆ ಎಂದು ಆರೋಪಿಸಿದ ಅವರು, “ಕ್ಷೇತ್ರದ ಶಾಸಕರು ತಂದೆಯೋ? ಮಗನೋ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
“ಒಂದೆಡೆ ಶಾಸಕರು ಪುತ್ರರತ್ತ ಬೆರಳು ತೋರಿಸುತ್ತಾರೆ. ಮತ್ತೊಂದೆಡೆ ಪುತ್ರರು ತಂದೆಯವರತ್ತ ತೋರಿಸುತ್ತಾರೆ. ಈ ನಡುವೆ ನಮ್ಮ ಸಮುದಾಯದ ಸಮಸ್ಯೆಗಳು ಮಾತ್ರ ಬಗೆಹರಿಯದೆ ಉಳಿದಿವೆ” ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ದಲಿತ ಸಮುದಾಯದ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸದೇ ತುಳಿತಕ್ಕೆ ಒಳಪಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿಯೂ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ಸಮುದಾಯದವರು ಒಗ್ಗೂಡಿ ಶಾಸಕರ ಕಚೇರಿ ಎದುರು ಧರಣಿ ಹಾಗೂ ಹರತಾಳ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಮುದಾಯದ ಮುಖಂಡರಾದ ಹೈಯಾಳಪ್ಪ ದೊಡ್ಡಮನಿ, ನಿಂಗಪ್ಪ ಮೂಗಿನ್, ಮಲ್ಲಿಕಾರ್ಜುನ್ ಸಾವೂರ್, ಭೀಮು ಸಾವೂರ್ ಹಾಗೂ ಬಸವರಾಜ ಮೂಗಿನ್ ಉಪಸ್ಥಿತರಿದ್ದು, ಬಡಾವಣೆಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


























