Home ಮುಖಪುಟ ಸುದ್ದಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಕೊನೆಗೂ ಸಿಐಡಿ ವಿಚಾರಣೆಗೆ ಹಾಜರು

ಕೆಪಿಎಸ್‌ಸಿ ಸದಸ್ಯೆ ಶಾಂತಾ ಕೊನೆಗೂ ಸಿಐಡಿ ವಿಚಾರಣೆಗೆ ಹಾಜರು

ಬೆಂಗಳೂರು,ಸೆ.೧೭-ಪಶುವೈದ್ಯಾಧಿಕಾರಿ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಸದಸ್ಯೆ ಶಾಂತಾ ಹೊಸಮನಿ ಕೊನೆಗೂ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.


ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಶಾಂತಾ ಹೊಸಮನಿ ಅವರು ಸಿಐಡಿ ಕಚೇರಿಗೆ ಅಗಮಿಸಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.


ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಹಗರಣ ಬಹಿರಂಗವಾದ ಬೆನ್ನಲ್ಲೇ ಶಾಂತಾ ನಾಪತ್ತೆಯಾಗಿದ್ದರು. ವಿಚಾರಣೆ ಸಂಬಂಧ ಸಿಐಡಿ ಅಧಿಕಾರಿಗಳು ಅವರಿಗೆ ನೋಟಿಸ್ ನೀಡಿದ್ದರು. ಅಲ್ಲದೆ, ಆರೋಪಿಯ ಪತ್ತೆಗಾಗಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಶೋಧ ನಡೆಸಿದ್ದರು.


ಆರೋಪಗಳೇನು:


ಪಶುವೈದ್ಯರ ಅಕ್ರಮ ನೇಮಕಾತಿ ಸಂಬಂಧ ಮಮಿತಾ ಎಂಬ ಅಭ್ಯರ್ಥಿಯ ಜೊತೆ ಮೂರು ಬಾರಿ ಫೋನ್ ಮೂಲಕ ಕೆಪಿಎಸ್ ಸಿ ಸದಸ್ಯೆ ಶಾಂತಾ ಹೊಸಮನಿ ಮಾತುಕತೆ ನಡೆಸಿದ್ದರು. ಸಂದರ್ಶನಕ್ಕೂ ಮೊದಲೇ ಅಭ್ಯರ್ಥಿಯ ಜೊತೆ ಸಂಭಾಷಣೆ ನಡೆಸುವ ಆರೋಪ ಅವರ ಮೇಲಿದ್ದು, ಇಡಿ ಅಧಿಕಾರಿಗಳಿಗೂ ಸಿಗದೇ ಅವರು ಪರಾರಿಯಾಗಿದ್ದರು.


ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ಮಾತ್ರವಲ್ಲದೆ ಎಇಇ ಅಕ್ರಮದಲ್ಲೂ ಶಾಂತಾ ಹೆಸರು ತಳಕುಹಾಕಿಕೊಂಡಿದೆ. ೨೦೨೩ರಲ್ಲಿ ಎಇಇ ಅಕ್ರಮ ತನಿಖೆಗೆ ಉಪ ಸಮಿತಿ ನೇಮಿಸಲಾಗಿತ್ತು. ಆದರೆ ಸದಸ್ಯರಿಗೆ ತಿಳಿಸಿದೆ ಆಯ್ಕೆ ಪಟ್ಟಿ ಪ್ರಕಟಿಸಲು ಶಾಂತ ಹೊಸಮನಿ ಮುಂದಾಗಿದ್ದರು. ಆಗಿನ ಕಾರ್ಯದರ್ಶಿ ಮೂಲಕ ಪ್ರಕಟಣೆಗೆ ಮುಂದಾಗಿದ್ದರು. ಆದರೆ ಕೆಲ ಸದಸ್ಯರ ಆಕ್ಷೇಪದಿಂದ ಪಟ್ಟಿ ಪ್ರಕಟವಾಗಿರಲಿಲ್ಲ. ಬಳಿಕ ಉಪ ಸಮಿತಿಯಿಂದ ಶಾಂತ ಹೊಸಮನಿ ಹೊರಗಿಡಲಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿತ್ತು.


ಇಡಿಗೂ ಸಿಗದ ಶಾಂತ:


ಜಾರಿ ನಿರ್ದೇಶನಾಲಯ (ಇಡಿ) ಆಗಸ್ಟ್ ೧೮ ರಂದು ಶಾಂತಾ ಹೊಸಮನಿ ಹಾಗೂ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಪ್ರಮುಖರ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತ್ತು. ತದನಂತರ ಸೆಪ್ಟೆಂಬರ್‌ನಲ್ಲಿ ಸಿಐಡಿ ಅಧಿಕಾರಿಗಳು ಸಹ ಇವರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇಷ್ಟೆಲ್ಲ ನಡೆದರೂ ಶಾಂತಾ ಹೊಸಮನಿ ಮಾತ್ರ ಅಧಿಕಾರಿಗಳ ಕೈಗೆ ಸಿಗದೆ ಸತಾಯಿಸುತ್ತಿದ್ದರು. ಆದರೀಗ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಕೊನೆಗೂ ಅವರು ಸಿಐಡಿ ಮುಂದೆ ಪ್ರತ್ಯಕ್ಷವಾಗಿದ್ದಾರೆ.