
ಚಿಕ್ಕಬಳ್ಳಾಪುರ.ಸೆ.೪-ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮತ್ತು ವೆಂಕಟರಾಮಪ್ಪ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಮಠ ಮತ್ತು ಅದರ ಪೀಠಾಧಿಪತಿಗಳು ಸಾರ್ವಜನಿಕರ ದೇಣಿಗೆ ಸರಕಾರ ಮಂಜೂರು ಮಾಡಿರುವ ಭೂಮಿಯನ್ನು ನಿರ್ವಹಿಸುವಲ್ಲಿ ಅಸಮರ್ಥರು ಎಂದು ಹೇಳಿರುವುದನ್ನು ರಾಜ್ಯ ಒಕ್ಕಲಿಗರ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಮಾಜಿ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶ್ರೀಮಠವು ಸುಮಾರು ೧೫೦೦-೨೦೦೦ ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಪ್ರಸಿದ್ಧ ಧಾರ್ಮಿಕ ಸಂಸ್ಥೆಯಾಗಿದೆ.ಒಕ್ಕಲಿಗ ಸಮುದಾಯವು ದೈವಸ್ವರೂಪರೆಂದು ಭಾವಿಸುವ ಭೈರವೈಕ್ಯ ಬಾಲಗಂಗಾಧರನಾಥ ಶ್ರೀ ಮತ್ತು ಈಗಿನ ಪೀಠಾಧಿಪತಿ
ನಿರ್ಮಲಾನಂದ ನಾಥ ಸ್ವಾಮೀಜಿರನ್ನು ಟೀಕಿಸಿರುವ ಇವರ ಧೋರಣೆ ಸರ್ವಥಾ ಸರಿಯಲ್ಲ ಎಂದು ಹೇಳಿದರು.
ಶ್ರೀಮಠ ಮತ್ತು ಪೀಠಾಧಿಪತಿಗಳು ಎಂದಿಗೂ ಕೂಡ ಭಕ್ತಾಧಿಗಳ ಧೇಣಿಗೆ ಮತ್ತು ಸರಕಾರಿ ಭೂಮಿಯನ್ನು ದುರುಪಯೋಗ ಪಡಿಸಿಕೊಂಡವರಲ್ಲ.ಶ್ರೀಮಠದಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿವೆ.ಇಂತಹ ಸಂಸ್ಥೆಯ ವಿರುದ್ಧ ಮಾತನಾಡುವುದು ಸರಿಯಲ್ಲ, ಇದನ್ನು ಕೂಡ ನಾವು ಖಂಡಿಸುತ್ತೇವೆ ಎಂದರು.
ಜೆ.ಕೆ.ಕೃಷ್ಣಾರೆಡ್ಡಿ ಇತ್ತೀಚೆಗೆ ಚಿಂತಾಮಣಿಯಲ್ಲಿ ನಡೆಸಿದ ಸುದ್ದಿಗೋಷಿಯಲ್ಲಿ ತಾಕತ್ತು ಧಮ್ಮು, ಯೋಗ್ಯತೆ, ಕಿತ್ತು ಗುಡ್ಡೆಹಾಕಿದ್ದೀರಾ? ಕತ್ತೆ ಕಾಯುತ್ತಿದ್ದಿರಾ?ಇಂತಹ ಕೆಳಮಟ್ಟದ ಅಸಾಂವಿಧಾನಿಕ ಪದಗಳನ್ನು ಬಳಸಿರುವುದು ಶೋಚನೀಯ ಮತ್ತು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಕೋನಪ್ಪರೆಡ್ಡಿ ಬೆಂಬಲಿಗ ಮುಖಂಡರು ಇದ್ದರು.
































