Home ಜಿಲ್ಲೆ ಬೆಂಗಳೂರು ಕೋಲಾರ ಕ್ರೀಡಾ ಸಂಘದ ೩೯ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ

ಕೋಲಾರ ಕ್ರೀಡಾ ಸಂಘದ ೩೯ನೇ ವರ್ಷದ ಬೇಸಿಗೆ ಶಿಬಿರದ ಸಮಾರೋಪ

ಕೋಲಾರ,ಮೇ,೪- ಮಕ್ಕಳನ್ನು ಪ್ರಕೃತಿ ಜೊತೆ ಬೆಳೆಸಬೇಕು, ಪರಿಸರ ಸಂರಕ್ಷಣೆ, ನಿಸರ್ಗದ ಮಹತ್ವ ಅರಿವು ಮೂಡಿಸಿ, ಅವರಿಗೆ ಸಂಸ್ಕಾರ, ಸಂಸ್ಕೃತಿಯ ಅರಿವು ನೀಡಿ ಸಮಾಜಮುಖಿಯಾಗಿ ಮುನ್ನಡೆಸಲು ಇಂತಹ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ರಾಜೇಂದ್ರಸಿಂಹ ತಿಳಿಸಿದರು.


ನಗರದ ಜಯನಗರದ ಅಂಬೇಡ್ಕರ್ ಉದ್ಯಾನವನದದಲ್ಲಿ ನಡೆದ ಕೋಲಾರ ಕ್ರೀಡಾ ಸಂಘದ ಸತತ ೩೯ ನೇ ವರ್ಷದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಮಕ್ಕಳಿಗೆ ಸಮಾಜದ ಕುರಿತು ತಿಳಿಸಿಕೊಡಬೇಕು ಎಂದರು.


ಇಂದು ಮಕ್ಕಳನ್ನು ಅಂಕಗಳಿಗೆ ಸೀಮಿತ ಮಾಡುತ್ತಿದ್ದೇವೆ, ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು, ಆರೋಗ್ಯವಂತರನ್ನಾಗಿಸಲು ಅಗತ್ಯವಾದ ಕ್ರೀಡಾ ಮನೋಭಾವ ಬೆಳೆಸಬೇಕು ಎಂಬುದನ್ನೇ ಮರೆತಿದ್ದೇವೆ ಎಂದ ಅವರು, ನಮ್ಮ ಸಂಸ್ಕೃತಿ ಉಳಿಸಲು ದೇಶಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.


ಮಕ್ಕಳು ಇಂದಿನ ದಿನಗಳಲ್ಲಿ ಅನುಭವಿಸುತ್ತಿರುವ ಮಾನಸಿಕ ಒತ್ತಡಗಳಿಗಳಿಂದ ಹೊರಬರಲು ಇಂತಹ ತರಬೇತಿಗಳು ಸಹಕಾರಿ, ಇಲ್ಲಿ ಪ್ರತಿಯೊಬ್ಬ ತರಬೇತುದಾರರು ಮಕ್ಕಳ ಬಗ್ಗೆ ವಹಿಸುವ ಕಾಳಜಿ ಆಶ್ಚರ್ಯಗೊಳಿಸುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಅಧ್ಯಕ್ಷರಾದಿಯಾಗಿ ಸಂಘದ ಪ್ರತಿಯೊಬ್ಬರು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಹಿರಿಯ ಕ್ರೀಡಾಪಟು ಅಂಚೆ ಅಶ್ವಥ್ ಮಾತನಾಡಿ, ಮಕ್ಕಳಿಗೆ ಸರ್ವಾಂಗೀಣ ಶಿಕ್ಷಣ ಇಂದಿನ ಅಗತ್ಯವಾಗಿದೆ, ಕ್ರೀಡೆಗಳಲ್ಲಿ ಅವರಿಗೆ ಆಸಕ್ತಿ ಇದ್ದರೂ ಪೋಷಕರು ಅವರನ್ನು ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದ ಅವರು, ಇಂತಹ ಶಿಬಿರಗಳು ಮಕ್ಕಳಲ್ಲಿ ಪರಸ್ಪರ ಸ್ನೇಹ,ಸಂಬಂಧದ ಬೆಸುಗೆ ನೀಡಿ ಸಮಾಜದೊಂದಿಗೆ ಇರಬೇಕು ಎಂಬ ಪಾಠ ಕಲಿಸುತ್ತವೆ ಎಂದರು.


ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ ಮಾತನಾಡಿ, ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸುತ್ತಿರುವ ಪೋಷಕರ ಪ್ರಯತ್ನಗಳಿಂದ ಇಂದು ಮಕ್ಕಳಲ್ಲಿ ಕ್ರೀಡಾಭಿರುಚಿ ಮರೆಯಾಗುತ್ತಿದೆ, ಕೇವಲ ಶೇ.೧೦೦ ಅಂಕ ಗಳಿಸಿದರೆ ಸಾಕು ಎಂಬ ಒತ್ತಡ ಮಕ್ಕಳ ಮೇಲೆಹಾಕಲಾಗುತ್ತಿದೆ ಇದರಿಂದ ಅನೇಕ ಮಕ್ಕಳಲ್ಲಿ ಖಿನ್ನತೆಗೂ ಕಾರಣವಾಗಿದೆ ಎಂದ ಅವರು, ಕ್ರೀಡೆಗಳು ಸಹಾ ಸಮಗ್ರ ಶಿಕ್ಷಣದ ಭಾಗ ಎಂಬುದನ್ನು ಪೋಷಕರು ಅರಿಯಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೀಡಾಸಂಘದ ಅಧ್ಯಕ್ಷ ಸಾ.ಮಾ. ಅನಿಲ್‌ಬಾಬು ಮಾತನಾಡಿ, ಬದಲಾದ ಆಹಾರಪದ್ದತಿ, ಅತಿಯಾದ ವಾಹನ ಬಳಕೆಯಿಂದಾಗಿ ಇಂದು ಸುಖಕರ ಜೀವನದೆಡೆ ಮನುಷ್ಯ ವಾಲುತ್ತಿದ್ದು ಇದರಿಂದ ಬೊಜ್ಜು ಮತ್ತಿತರ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿರುವುದನ್ನು ಕಾಣುತ್ತಿದ್ದೇವೆ, ಇದನ್ನು ತಪ್ಪಿಸಿ ಮಕ್ಕಳಲ್ಲಿ ವ್ಯಾಯಾಮ, ಕ್ರೀಡೆಗಳಿಂದಾಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಿ ಅವರಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವ ಉದ್ದೇಶದಿಂದಲೇ ಈ ಶಿಬಿರವನ್ನು ಸತತ ೩೯ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ ಎಂದರು.


ಪೋಷಕರ ಪರವಾಗಿ ಮಾತನಾಡಿದ ಜಿಲ್ಲಾ ನೌಕರರ ಸಂಘದ ನಿಕಟಪೂರ್ವ ಖಜಾಂಚಿ ವಿಜಯ್, ಆರೋಗ್ಯವಂತ ಪ್ರಜೆ ದೇಶದ ಆಸ್ತಿ ಇದ್ದಂತೆ. ಮಕ್ಕಳನ್ನು ದೇಶದ ಆಸ್ತಿಯಾಗಿ ರೂಪಿಸುತ್ತಿರುವ ಸಂಘದ ಕಾರ್ಯಕ್ಕೆ ಧನ್ಯವಾದ ಅರ್ಪಿಸಿ, ಮಕ್ಕಳು ಉತ್ತಮ ಆಹಾರ ಪದ್ದತಿ ಅನುಸರಿಸಿ, ತರಕಾರಿ ಹೆಚ್ಚು ಸೇವಿಸಿ ಎಂದು ಸಲಹೆ ನೀಡಿದರು.


ಸ್ವಾಗತಿಸಿದ ಹಿರಿಯ ಕ್ರೀಡಾಪಟು ಪುರುಷೋತ್ತಮ್, ಮಕ್ಕಳಲ್ಲಿ ದೇಶಪ್ರೇಮ, ಸಂಸ್ಕಾರ ಕ್ರೀಡಾಭಿರುಚಿ ಬೆಳೆಸುವುದರ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದೇ ಕೋಲಾರ ಕ್ರೀಡಾಸಂಘದ ಗುರಿಯಾಗಿದೆ ಎಂದು ತಿಳಿಸಿದರು.


ಸಂಘವು ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದು, ಮಕ್ಕಳ ಮಾನಸಿಕ ಮತ್ತು ಭೌಧಿಕ ವಿಕಸನಕ್ಕಾಗಿ ೩೯ ವರ್ಷಗಳಿಂದ ಬೇಸಿಗೆ ತರಬೇತಿ ಶಿಬಿರವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ೧೦ ವರ್ಷಗಳಿಂದ ಸೈನಿಕ ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಜ್ಯೂವೆಲರ್‍ಸ್‌ನ ವೆಂಕಟೇಶ್,ಶಿಬಿರಕ್ಕೆ ಸಹಕಾರ ನೀಡಿದರು. ಪ್ರಭಾಕರ್ ಫೈನಾನ್ಸ್ ಮಾಲೀಕರಾದ ಪವನ್ ಮಕ್ಕಳಿಗೆ ತಿಂಡಿಯ ಕೊಡುಗೆ ನೀಡಿದ್ದು, ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.


ತೋಟಗಾರಿಕಾ ಮಹಾವಿದ್ಯಾಲಯದ ಪರಮೇಶ್ವರ್, ತರಬೇತುದಾರರಾದ ಕೃಷ್ಣಮೂರ್ತಿ, ಸುರೇಶ್ ಬಾಬು, ಆನಂದ್, ಕೃಷ್ಣ, ನಾಗೇಶ್ ಹಾಗೂ ಮಕ್ಕಳ ಪೋಷಕರು ಹಾಜರಿದ್ದರು.ಶಿಬಿರಾರ್ಥಿಗಳಾದ ಪೂರ್ವಿಕಾ ನಿರೂಪಿಸಿ, ರಕ್ಷಿತಾ ವಂದಿಸಿದರು.