
ಬೀದರ್: ಕರ್ನಾಟಕ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಪ್ರೊ. ಎನ್. ಜಫೇಟ್, ವ್ಯವಸ್ಥಾಪಕ ನಿರ್ದೇಶಕರಾದ ಆಂತೋನಿ ಮರಿಯಂ ಹಾಗೂ ಉಪಾಧ್ಯಕ್ಷರಾದ ಸಂಜಯ್ ಜಾಗೀರ್ದಾರ್ ಅವರನ್ನು ತಕ್ಷಣವೇ ಅಧಿಕಾರದಿಂದ ಬಿಡುಗಡೆಗೊಳಿಸಿ, ಸಮುದಾಯದ ಅಭಿವೃದ್ಧಿಗೆ ಬದ್ಧರಾಗಿರುವ ಹೊಸ ಅಧಿಕಾರಿಗಳನ್ನು ನೇಮಿಸಬೇಕೆಂದು ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಆಗ್ರಹಿಸುತ್ತಿರುವುದಾಗಿ ಮಹಾಸಭಾದ ಬೀದರ್ ಜಿಲ್ಲಾ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಇಸಾಕ್ ಕೆಂಪೆನೋರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ವಿಶೇಷವಾಗಿ ಬೀದರ್ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿ ಕಾಮಗಾರಿಗಳು, ಚರ್ಚ್ಗಳ ನವೀಕರಣ, ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಅನುದಾನ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಪ್ರಸ್ತುತ ನಿಗಮದ ಆಡಳಿತದಲ್ಲಿ ಸಮುದಾಯದ ಅಭಿವೃದ್ಧಿ ಶೂನ್ಯವಾಗಿದ್ದು, ಮಂಜೂರಾದ ಅನುದಾನಗಳು ಹಾಗೂ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಬೀದರ್ ಜಿಲ್ಲೆಯಲ್ಲಿ ಮಂಜೂರಾಗಿರುವ ೧೭ ಗಂಗಾ ಕಲ್ಯಾಣ ಯೋಜನೆಗಳಿಗೆ ಇದುವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಅಲ್ಲದೆ, ಸುಮಾರು ೬೦ಕ್ಕೂ ಹೆಚ್ಚು ಸಭೆಗಳ ಅನುದಾನಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಿದ್ದರೂ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ನಿಗಮದಲ್ಲಿ ಅಗತ್ಯವಿಲ್ಲದ ಕಟ್ಟಡ ಹಾಗೂ ಸಿವಿಲ್ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಕೆಲವೇ ಸಂಸ್ಥೆಗಳಿಗೆ ಅನುದಾನ ನೀಡುವ ಮೂಲಕ ಇತರೆ ಸಂಘಟನೆಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ದಾಖಲೆಗಳ ನಿರ್ವಹಣೆಯಲ್ಲಿಯೂ ಅವ್ಯವಸ್ಥೆ ಕಂಡು ಬಂದಿದ್ದು, ಅಧಿಕಾರ ದುರುಪಯೋಗ ನಡೆದಿದೆ ಎಂದು ಆಪಾದಿಸಿದರು.
ಸರ್ಕಾರ ಯಾವುದೇ ಸೂಕ್ತ ಮಾನದಂಡ ಪಾಲಿಸದೆ ನೇಮಕಾತಿ ಮಾಡಿರುವ ಪರಿಣಾಮ ಸಮುದಾಯದ ಅಭಿವೃದ್ಧಿ ಕುಂಠಿತಗೊAಡಿದೆ. ಆದ್ದರಿಂದ ಪ್ರಸ್ತುತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಕೂಡಲೇ ಅಧಿಕಾರದಿಂದ ಬಿಡುಗಡೆಗೊಳಿಸಿ, ಅಭಿವೃದ್ಧಿಗೆ ಆದ್ಯತೆ ನೀಡುವ ಅಧಿಕಾರಿಗಳನ್ನು ನೇಮಿಸಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳು ಹಾಗೂ ಅನುದಾನಗಳನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಆಗಸ್ಟ್ ೧, ೨೦೨೬ರೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ “ಬೆಂಗಳೂರು ಚಲೋ” ಕಾರ್ಯಕ್ರಮದಡಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಇಸಾಕ್ ಕೆಂಪೆನೋರ್ ಎಚ್ಚರಿಕೆ ನೀಡಿದರು.
ಮಹಾಸಭಾದ ಪದಾಧಿಕಾರಿಗಳಾದ ಸಂಪತಕುಮಾರ, ಅರುಣ, ಜೈರಾಜ, ಪವನ ಹೊಸಮನಿ, ಸುಜ್ಞಾನ, ನವೀನ್, ಜಾನಸನ್, ರಿತೀಕ್, ವಿಲ್ಸನ್ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು






























