Home ಜಿಲ್ಲೆ ಬೆಂಗಳೂರು ಆರ್‌ಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಾಸೌರಭ

ಆರ್‌ಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಾಸೌರಭ

ಬೆಂಗಳೂರು, ಮೇ.೧-ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ಸಂಭ್ರಮ “ಕಲಾಸೌರಭ – ೨೦೨೬” ಆರ್‌ಆರ್‌ಎಂಸಿಹೆಚ್. ಆವರಣದ ಎಸಿಎಸ್ ಕನ್ವೆನ್ನನ್ ಸೆಂಟರ್‌ನಲ್ಲಿ ಬಹಳ ಸಡಗರದಿಂದ ಆಚರಿಸಲಾಯಿತು.


ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಷಣ್ಮುಗಂ, ಅಧ್ಯಕ್ಷ ಎಸಿಎಸ್ ಅರುಣ್ ಕುಮಾರ್ ಹಾಗೂ ಲಲಿತಾ ಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಜರುಗಿತು. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಾನಂದ್, ಸಿಇಒ ಸಿ.ಎನ್. ಸೀತಾರಾಮ್ ಐಎಎಸ್ (ನಿವೃತ್ತ), ವಿಶೇಷಾಧಿಕಾರಿ ಡಾ. ಎಸ್. ಜಯಬಾಲನ್ ಮತ್ತು ಪ್ರಾಂಶುಪಾಲರಾದ ಡಾ.ಆರ್. ಬಾಲಕೃಷ್ಣ ಅವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಮೆರುಗು ನೀಡಿತು.


ಖ್ಯಾತ ಚಲನಚಿತ್ರ ನಟಿ ಬೃಂದಾ ಆಚಾರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕಾಲೇಜು ದಿನಗಳ ಮಹತ್ವವನ್ನು ತಿಳಿಸಿದರು ಮತ್ತು ಪಠ್ಯದ ಜೊತೆಗೆ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸೃಜನಶೀಲತೆ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಅವರು ಕಿವಿಮಾತು ಹೇಳಿದರು.


ಸಂಭ್ರಮಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು, ನೃತ್ಯ ಮತ್ತು ಕ್ರೀಡಾ ಚಟುವಟಿಕೆಗಳು ನಡೆದವು. ಮುಖ್ಯವಾಗಿ, ಸೃಜನಾತ್ಮಕವಾಗಿ ಮೂಡಿಬಂದ ಫ್ಯಾಶನ್ ಶೋ ಮತ್ತು ಫೇಸ್ ಪೇಂಟಿಂಗ್ ಸ್ಪರ್ಧೆಗಳು ನೋಡುಗರ ಮನಗೆದ್ದವು. ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿತರಿಸಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.


ಕಾರ್ಯಕ್ರಮದ ಅಂತ್ಯದಲ್ಲಿ ‘ಬೀಟ್ ಗುರುಸ್ ಬ್ಯಾಂಡ್‌ನಿಂದ ಏರ್ಪಡಿಸಲಾಗಿದ್ದ ಲೈವ್ ಮ್ಯೂಸಿಕ್ ಮತ್ತು ಡಿಜೆ ಸಂಜೆ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿತು. ಒಟ್ಟಾರೆಯಾಗಿ, “ಕಲಾಸೌರಭ – ೨೦೨೬” ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಪ್ರತಿಬಿಂಬಿಸುವ ಮೂಲಕ ಸ್ಮರಣೀಯವಾಗಿ ಮುಕ್ತಾಯಗೊಂಡಿತು.