
ಸಿರಾ, ಮೇ ೧೨- ಜಲ ಜೀವನ್ ಮಿಷನ್ ಯೋಜನೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ತಲಾ ೫೦ರ ಅನುಪಾತದಲ್ಲಿ ೧೩೫೦೦ ಕೋಟಿ ಅನುದಾನ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಆರೋಪಿಸಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲ ಜೀವನ್ ಎಂಬ ಮಹತ್ತರವಾದ ಯೋಜನೆಯನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರೂಪಿಸಿದ್ದು, ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಅನುದಾನ ನೀಡುವಲ್ಲಿ ವಿಫಲವಾಗಿದೆ. ಆದರೂ ಸಹ ಸಿರಾ ತಾಲ್ಲೂಕಿನಲ್ಲಿ ೩೭೯ ಪ್ರಾಜೆಕ್ಟ್ ಗಳು ಈಗಾಗಲೇ ಪೂರ್ಣಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ತಾಲ್ಲೂಕಿನ ೪೦ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಬರ ಗ್ಯಾರಂಟಿ, ಅದು ಈಗಾಗಲೇ ಡಿಕ್ಲೇರ್ ಸಹ ಆಗಿದೆ. ಕೊಳವೆ ಬಾವಿ ಕೊರೆದರೆ ನೀರು ಸಿಗುತ್ತಿಲ್ಲ ಎಂದು ತಿಳಿಸಿದರು.
ಇಂತಹ ಸಮಯದಲ್ಲಿ ನಗರದಲ್ಲಿ ಕೈಗೊಂಡಿರುವ ಜೆಜೆಎಂ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ. ಒಂದು ವಾರ್ಡಿನಲ್ಲಿಯೂ ರಸ್ತೆಗಳು ಸರಿಯಾಗಿಲ್ಲ. ಯಾವೊಂದು ವಾರ್ಡಿನಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ. ಯಾವಾಗ ಕಾಮಗಾರಿ ಪೂರ್ಣಗೊಳ್ಳುತ್ತದೆ, ಇನ್ನೆಷ್ಟು ದಿನ ಜನ ಕಷ್ಟ ಅನುಭವಿಸಬೇಕು ಎಂದು ಸದಸ್ಯರು ಪ್ರಶ್ನಿಸಿದರು.
ಇನ್ನು ರಸ್ತೆಯುದ್ದಕ್ಖೂ ಪ್ಲೆಕ್ಸ್‌ಗಳನ್ನ ಹಾಕಿ ನಗರದ ಸೌಂದರ್ಯ ಹಾಳಾಗಿದೆ. ಇದರಿಂದ ಸಾಕಷ್ಟು ಅವಘಡಗಳು ಸಂಭವಿಸುತ್ತವೆ. ಹಾಗಾಗಿ ಇದರ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ನಗರಸಭೆ ಅನುಮತಿಯನ್ನು ಪಡೆದು ಪ್ಲೆಕ್ಸ್‌ಗಳನ್ನು ಅಳವಡಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಇನ್ನು ಐಡಿಎಸ್‌ಎಂಟಿ ಅಂಗಡಿ ಮಳಿಗೆಗಳ ಮಾಲೀಕರು ಲಕ್ಷಾಂತರ ರೂ. ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇತ್ತ ಮಳಿಗೆ ಖಾಲಿ ಮಾಡಲು ಸಹಾ ಸಾಧ್ಯವಾಗುತ್ತಿಲ್ಲ. ಕೂಡಲೇ ಇದಕ್ಕೊಂದು ಅಂತಿಮ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಹಂತದಲ್ಲಿ ಮಾತನಾಡಿದ ಪೌರಾಯುಕ್ತ ಕೆ. ರುದ್ರೇಶ್, ಈ ಸಂಬಂಧವಾಗಿ ಜಿಲ್ಲಾಧಿಕಾರಿಗಳ ಹತ್ತಿರ ಕೂಲಂಕುಶವಾಗಿ ಮಾತ ನಾಡಿದ್ದು, ಮುಂದಿನ ೧೫ ದಿನದ ಒಳಗೆ ಎಲ್ಲಾ ಪ್ರಕ್ರಿಯೆಗಳು ಮುಗಿದು, ಮಳಿಗೆಗಳ ಹರಾಜು ಪ್ರಕ್ರಿಯೆ ಮಾಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ರವರನ್ನ ಶಾಸಕರು ಸನ್ಮಾನಿಸಿದರು.
ಸಭೆಯಲ್ಲಿ ಅಧ್ಯಕ್ಷ ಜೀಶಾನ್ ಅಹಮ್ಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್ ಸೇರಿದಂತೆ ನಗರಸಭೆ ಸದಸ್ಯರುಗಳು, ಅಧಿಕಾರಿಗಳು ಭಾಗವಹಿಸಿದ್ದರು.


























