Home ಜಿಲ್ಲೆ ಬೆಂಗಳೂರು ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಸಮರ

ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಸಮರ

ಬೆಂಗಳೂರು/ಬಿಡದಿ, ಜೂ.೨೧- ರಾಜ್ಯ ಸರ್ಕಾರದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಇಂದು ಬಿಡದಿ ಭಾಗದಲ್ಲಿ ಬೃಹತ್ ಹೋರಾಟ ನಡೆಸಿತ್ತು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರೈತರ ಪಾದಯಾತ್ರೆಗೆ ಚಾಲನೆ ನೀಡಲಾಯಿತು.


ಅಂಚಿಪುರ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಅಂಚಿಪುರ ಕಾಲೊನಿ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಹಾಗೂ ಹೊಸೂರುವರೆಗೆ ಸಾಗಲಿದ್ದು, ಹೊಸೂರಿನಲ್ಲಿ ಬಹಿರಂಗ ಸಭೆಯೊಂದಿಗೆ ಸಮಾರೋಪಗೊಂಡಿತ್ತು.


ಪಾದಯಾತ್ರೆಗೂ ಮುನ್ನ ರೈತರನ್ನುದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸರ್ಕಾರ ಈಗಾಗಲೇ ಒಂದು ಹಂತದ ಅಂತಿಮ ಅಧಿಸೂಚನೆ ಹೊರಡಿಸಿದ್ದು, ರೈತರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. “ರೈತರ ಒಗ್ಗಟ್ಟು ಮುರಿಯಲು ದಲ್ಲಾಳಿಗಳನ್ನು ಬಳಸಲಾಗುತ್ತಿದೆ. ಇದಕ್ಕೆ ಯಾರ ಕುಮ್ಮಕ್ಕಿದೆ ಎಂಬುದು ನಮಗೆ ಗೊತ್ತಿದೆ,” ಎಂದು ಅವರು ಹೇಳಿದರು.


ಯೋಜನೆಗಾಗಿ ಸುಮಾರು ೫೦೦ ರಿಂದ ೫೧೮ ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದ್ದು, ಇದರಿಂದ ೨೬ ಗ್ರಾಮಗಳ ೭೫೫ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಜೆಡಿಎಸ್ ಆರೋಪಿಸಿದೆ. ಭೂಮಿ ಕಳೆದುಕೊಳ್ಳುವವರಲ್ಲಿ ಶೇ.೮೨ರಷ್ಟು ಸಣ್ಣ ಹಾಗೂ ಅತಿ ಸಣ್ಣ ರೈತರು ಇದ್ದಾರೆ. ದಲಿತ ಹಾಗೂ ಹಿಂದುಳಿದ ವರ್ಗದ ರೈತರಿಗೆ ಹೆಚ್ಚಿನ ಹೊಡೆತ ಬೀಳಲಿದೆ ಎಂದು ಪಕ್ಷ ವಾದಿಸಿದೆ.


ರೈತರ ಅನುಮತಿ ಪಡೆಯದೇ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದ್ದು, ೨೦೧೩ರ ಭೂಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.


ಸರ್ಕಾರಕ್ಕೆ ಸವಾಲ್ ಹಾಕಿದ ಅವರು, “ರೆಡ್ ಝೋನ್ ಎಂದು ಘೋಷಿಸಿರುವ ಪ್ರದೇಶವನ್ನು ಡಿನೋಟಿಫೈ ಮಾಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ. ನಾವು ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮಾಡುತ್ತೇವೆ,” ಎಂದರು.


ತಮ್ಮ ಕುಟುಂಬದ ಜಮೀನು ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರಿಸಿದ ನಿಖಿಲ್, “ಅನಿತಾ ಕುಮಾರಸ್ವಾಮಿ ಹೆಸರಲ್ಲಿ ೨೭ ಎಕರೆ ಹಾಗೂ ನನ್ನ ಹೆಸರಲ್ಲಿ ೫ ಎಕರೆ ಜಮೀನನ್ನು ಕೋವಿಡ್ ಅವಧಿಯಲ್ಲಿ ಖರೀದಿಸಲಾಗಿದೆ. ಹೈನುಗಾರಿಕೆ ಆಧಾರಿತ ಹಾಲು ಸಂಸ್ಕರಣಾ ಘಟಕ ಸ್ಥಾಪನೆ ಉದ್ದೇಶದಿಂದ ಮಾತ್ರ ಜಮೀನು ಖರೀದಿಸಿದ್ದು, ಬೇರೆ ಯಾವುದೇ ಉದ್ದೇಶ ಇಲ್ಲ,” ಎಂದು ಸ್ಪಷ್ಟಪಡಿಸಿದರು.


“ನಮ್ಮ ಕುಟುಂಬದ ಹೆಸರಲ್ಲಿ ಇರುವ ಆಸ್ತಿಯನ್ನೇ ರೈತರು ಹಾಗೂ ಸಾರ್ವಜನಿಕರ ಉದ್ದೇಶಕ್ಕಾಗಿ ಆಸ್ಪತ್ರೆ ಅಥವಾ ವೃದ್ಧಾಶ್ರಮ ನಿರ್ಮಾಣಕ್ಕೆ ನೀಡಲು ಸಿದ್ಧ. ಆದರೆ ಸರ್ಕಾರ ಈ ಭೂಸ್ವಾಧೀನವನ್ನು ಕೈಬಿಡಬೇಕು. ಯೋಜನೆಯ ತಾಂತ್ರಿಕ ಮಾಹಿತಿಯನ್ನು ರೈತರ ಮುಂದೆ ಬಹಿರಂಗಪಡಿಸಬೇಕು,” ಎಂದು ಆಗ್ರಹಿಸಿದರು.


ಯೋಜನೆಯಿಂದ ಈ ಭಾಗದ ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಗೆ ತೀವ್ರ ಹೊಡೆತ ಬೀಳಲಿದೆ. “ಈ ಯೋಜನೆ ಯಾರ ಅನುಕೂಲಕ್ಕಾಗಿ? ಯಾರಿಗೆ ಲಾಭ ಮಾಡಿಕೊಡಲು ಹೊರಟಿದ್ದೀರಿ? ಇದರಲ್ಲಿ ನಿಮ್ಮ ಪರ್ಸೆಂಟೇಜ್ ಎಷ್ಟು?” ಎಂದು ಸರ್ಕಾರವನ್ನು ಪ್ರಶ್ನಿಸಿದರು.


ಇದೇ ವೇಳೆ, ಯೋಜನೆಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದು, ರೈತರ ಹೋರಾಟಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ಮುಖಂಡರು ಸಹ ಬೆಂಬಲ ಸೂಚಿಸಿದ್ದಾರೆ.


ಇತ್ತ ಸರ್ಕಾರ ಮಾತ್ರ, ಬಿಡದಿ ಟೌನ್‌ಶಿಪ್ ಯೋಜನೆ ಭವಿಷ್ಯದ ಎಐ ಸಿಟಿ ಹಾಗೂ ಉಪನಗರ ಅಭಿವೃದ್ಧಿಗೆ ಮಹತ್ವದ್ದಾಗಿದ್ದು, ಬಹುತೇಕ ರೈತರ ಒಪ್ಪಿಗೆಯೊಂದಿಗೆ ಯೋಜನೆ ಜಾರಿಯಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ.


ಬಿಡದಿ ಟೌನ್‌ಶಿಪ್ ವಿವಾದ ಈಗ ಅಭಿವೃದ್ಧಿ ಯೋಜನೆಯ ಮಿತಿಯನ್ನು ಮೀರಿ, ರಾಜ್ಯ ರಾಜಕೀಯದ ಪ್ರಮುಖ ಸಂಘರ್ಷವಾಗಿ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ರೈತರ ಹೋರಾಟ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ