
ಬೆಂಗಳೂರು, ಏ. ೩೦- ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಸಮಯವಿದೆ. ಆ ಸಮಯ ಬಂದಾಗ ನೋಡೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಹೇಳುವ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ, ಮುಂದಿನ ಸಿಎಂ ತಾವಾಗಬೇಕು ಎಂಬೆಲ್ಲಾ ಚರ್ಚೆಗಳನ್ನು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.
ಕಲಬುರುಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸದ್ಯ ಸಿದ್ದರಾಮಯ್ಯ ಇದ್ದಾರೆ. ಹೀಗಿರುವಾಗ ನಾನು ಮುಖ್ಯಮಂತ್ರಿಯಾಗುವ ವಿಚಾರ ಇಲ್ಲಿ ಬರುವುದಿಲ್ಲ. ಸಿಎಂ ಬದಲಾವಣೆ ವಿಚಾರ ಬಂದರೆ ನಾನು, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಎಲ್ಲ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಸದ್ಯ ಸಿಎಂ ಬದಲಾವಣೆಗೆ ಇನ್ನು ಸಮಯವಿದೆ. ಆ ಸಮಯ ಬಂದಾಗ ನೋಡೋಣ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷರ ಈ ಹೇಳಿಕೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು, ಮೇ ನಲ್ಲಿ ನಾಯಕತ್ವ ಬದಲಾಗಲಿದೆ ಎಂಬ ಚರ್ಚೆಗಳಿಗೆ ತೆರೆ ಎಳೆದಂತೆ ಅವರು ಮಾತನಾಡಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಬದಲಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಮುಖ್ಯಮಂತ್ರಿ ಆದರೆ ಸಂತೋಷ ಎಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಹೇಳಿಕೆಗೂ ಪ್ರತಿಕ್ರಿಯಿಸಿರುವ ಖರ್ಗೆ ಅವರು, ಎಲ್ಲರೂ ಹೇಳಿದ್ದಾರೆ. ನೀವು ಹೇಳ್ತಿರೀ, ಹೈಕಮಾಂಡ್ ಹೇಳುತ್ತೆ ನಮ್ಮ ಹಣೆ ಬರಹ ಎನ್ನುವುದಕ್ಕಿಂತ ಸಿದ್ಧಾಂತ ಮುಖ್ಯ. ಪಕ್ಷದಲ್ಲಿ ಇಷ್ಟು ವರ್ಷ ದುಡಿದುಕೊಂಡು ಬಂದಿದ್ದೇನೆ ಎಂದು ಹೇಳಿ, ಸಿಎಂ ರೇಸ್‌ನಲ್ಲಿ ತಾವಿದ್ದರೂ ಅಚ್ಚರಿ ಇಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ, ಮುಖ್ಯಮಂತ್ರಿ ಯಾರಾಗಬೇಕು ಎಲ್ಲ ವಿಚಾರಗಳನ್ನು ಹೆಚ್ಚಾಗಿ ಸೋನಿಯಾಗಾಂಧಿ ಅವರೇ ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಸಮಯ ಬಂದರೆ ಎಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ ಎಂದು ಹೇಳುವ ಮೂಲಕ ಸದ್ಯ ನಾಯಕತ್ವ ಬದಲಾವಣೆಯ ಹೇಳಿಕೆಗಳನ್ನು ಅವರು ತಳ್ಳಿ ಹಾಕಿದಂತೆ ಮಾತನಾಡಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲಗಳಿದ್ದರೆ ಅದನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಯಾವಾಗ, ಏನು ಮಾಡಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ. ಎಲ್ಲರೂ ಸೇರಿ ಚರ್ಚಿಸಿಯೇ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರಗಳು ಮುನ್ನಲೆಗೆ ಬಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ , ಮಾಜಿ ಸಂಸದ ಡಿ.ಕೆ. ಸುರೇಶ್ ದೆಹಲಿಗೆ ತೆರಳಿ ಹೈಕಮಾಂಡ್‌ನ್ನು ಭೇಟಿ ಮಾಡಿ ಅಧಿಕಾರ ಹಂಚಿಕೆಯ ಒಪ್ಪಂದ ಯಾರಿಗೆ ಪಟ್ಟು ಹಿಡಿದ ನಂತರ ಮುಖ್ಯಮಂತ್ರಿಯಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರುಗಳಾದ ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಸಿದ್ಧರಾಮಯ್ಯ ಪರ ಲಾಬಿ ನಡೆಸಿದ್ದರು.
ಈ ಎಲ್ಲ ಬೆಳವಣಿಗೆಗಳ ನಂತರ ಮೇ ಎರಡನೇ ವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಹಿ ಸುದ್ದಿ ಸಿಗಲಿದೆ ಎಂಬ ಚರ್ಚೆಗಳು ಕಾಂಗ್ರೆಸ್‌ನಲ್ಲಿ ನಡೆದಿದ್ದವು. ಇದರ ಮಧ್ಯೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರು ಮುಖ್ಯಮಂತ್ರಿ ಬದಲಾವಣೆಗೆ ಸಮಯವಿದೆ. ಆ ಸಮಯ ಬಂದಾಗ ನೋಡೋಣ ಎಂದು ಹೇಳಿರುವುದು ಮೇ ತಿಂಗಳಲ್ಲಿ ನಾಯಕತ್ವ ಬದಲಾವಣೆಗಳಾಗುತ್ತವೆ ಎಂಬ ಚರ್ಚೆಗಳಿಗೆ ತೆರೆ ಎಳೆದಂತಿದೆ.
ಎಐಸಿಸಿ ಅಧ್ಯಕ್ಷರ ಈ ಹೇಳಿಕೆ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬಂದಿದ್ದು, ಮುಂದೆ ಕಾಂಗ್ರೆಸ್‌ನಲ್ಲಿ ಯಾವ ರೀತಿಯ ಬೆಳವಣಿಗೆಗಳಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಖರ್ಗೆ ಸಿಎಂ ಆದ್ರೆ ತಪ್ಪೇನು
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನಖರ್ಗೆ ಅವರು ಮುಖ್ಯಮಂತ್ರಿಯಾದರೆ ಸಂತೋಷ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಮಲ್ಲಿಕಾರ್ಜುನಖರ್ಗೆ ಅವರ ಸಮಕಾಲಿನರು ಮುಖ್ಯಮಂತ್ರಿ ಆಗಿರುವಾಗ ಖರ್ಗೆ ಮುಖ್ಯಮಂತ್ರಿಯಾದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾಜುನಖರ್ಗೆ ಅವರ ಸಮಕಾಲೀನರಾದ ಆರ್.ಗುಂಡೂರಾವ್, ವೀರಪ್ಪ ಮೊಯ್ಲಿ ಇವರೆಲ್ಲಾ ಮುಖ್ಯಮಂತ್ರಿ ಆದರು ಖರ್ಗೆ ಅವರು ಆಗಲಿ ಎಂಬುದು ತಮ್ಮ ಆಶಯ ಹಾಗಾಗಿ ನಾನು ಖರ್ಗೆ ಮುಖ್ಯಮಂತ್ರಿ ಆದರೆ ಸಂತೋಷ ಎಂದು ಹೇಳಿದ್ದೆ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರದ್ದು ೫೦ ವರ್ಷದ ಸಾಧನೆ ಅವರಿಗೆ ಹೈಕಮಾಂಡ್ ಮುಖ್ಯಮಂತ್ರು ಹುದೆ ನೀಡಿದರೆ ತಪ್ಪೇನು ಎಂದು ನಾನು ಹೇಳಿದ್ದೆ ಏನೆ ಇರಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
























