
ನವದೆಹಲಿ, ಅ.7- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿತು. ಜಂತರ್ ಮಂತರ್ ಕಡೆಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರನ್ನು ದೆಹಲಿ ಪೊಲೀಸರು ಇಂದು ಮತ್ತೆ ವಶಕ್ಕೆ ಪಡೆದಿದ್ದಾರೆ.
ಸ್ಥಳದಲ್ಲಿದ್ದ ಇತರ ಪ್ರತಿಭಟನಾಕಾರರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ವಾಹನಗಳಲ್ಲಿ ಕರೆದೊಯ್ದಿದ್ದಾರೆ. ಈ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಆ ಬಸ್‌ಗಳ ಪೈಕಿ ಒಂದರ ಟೈರ್‌ಗಳನ್ನು ಪಂಕ್ಚರ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ಸಂಸದರು ಮತ್ತು ಕಾರ್ಯಕರ್ತರು ಬಸ್‌ಗಳಲ್ಲಿ ಜಂತರ್ ಮಂತರ್ ಕಡೆಗೆ ತೆರಳುತ್ತಿದ್ದ ವೇಳೆ ಪೊಲೀಸರು ಮಾರ್ಗ ಮಧ್ಯೆ ಅವರನ್ನು ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ರಾಹುಲ್ ಗಾಂಧಿ ಹಾಗೂ ಇತರ ನಾಯಕರನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆದು, ಅದರ ಟೈರ್‌ಗಳನ್ನು ಪಂಕ್ಚರ್ ಮಾಡಿದ್ದಾರೆ . ಕೆಲ ಕಾಂಗ್ರೆಸ್ ನಾಯಕರು ಬಸ್ ಮೇಲೆಯೂ ಹತ್ತಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು. ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿ ಅವರನ್ನು ಅಲ್ಲಿಂದ ತೆರವುಗೊಳಿಸಿ ಪೊಲೀಸರು ಬಸ್‌ಗೆ ಕರೆದೊಯ್ದರು. ರಾಹುಲ್ ಗಾಂಧಿಯವರನ್ನೂ ಪೊಲೀಸರು ವಶಕ್ಕೆ ಪಡೆದರು.
ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಚುನಾವಣಾ ಆಯೋಗದೊಂದಿಗೆ ಸಭೆ ನಡೆಸಲು ಅವಕಾಶ ನೀಡಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.
ಪ್ರತಿಭಟನೆಗೆ ಅನುಮತಿ ಹಾಗೂ ಕಾನೂನು ಸುವ್ಯವಸ್ಥೆಯ ಕಾರಣಗಳನ್ನು ಉಲ್ಲೇಖಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ, ಶಾಂತಿಯುತ ಪ್ರತಿಭಟನೆ ನಡೆಸುವುದು ತಮ್ಮ ಪ್ರಜಾಸತ್ತಾತ್ಮಕ ಹಕ್ಕು ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ.

























