Home ಜಿಲ್ಲೆ ತುಮಕೂರು ಹುಳಿಯಾರು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಸಿಬಿಎಸ್

ಹುಳಿಯಾರು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಸಿಬಿಎಸ್

ಹುಳಿಯಾರು, ಮೇ ೧೧- ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳಬಾರದು. ಅಧಿಕಾರ ಎಂಬುದು ಜನರ ಸೇವೆಗಾಗಿ ಇರುವ ಸಾಧನ. ಆ ನಿಟ್ಟಿನಲ್ಲಿ ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ಬಂದು ಆಲಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಶಾಸಕ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು ಹೇಳಿದರು.


ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ೨೭ ನೇ ವಾರದ ‘ಮನೆ ಬಾಗಿಲಿಗೆ ಮನೆ ಮಗ’ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಈಗಾಗಲೇ ಚಿಕ್ಕನಾಯಕನಹಳ್ಳಿಯಲ್ಲಿ ೧೦೯ ವಾರಗಳು ಹಾಗೂ ಸಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯಲ್ಲಿ ೪೯ ವಾರಗಳ ಕಾಲ ನಿರಂತರವಾಗಿ ಯಶಸ್ವಿಯಾಗಿ ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗಿದೆ. ಪ್ರಸ್ತುತ ಹುಳಿಯಾರು ಪಟ್ಟಣ ಪಂಚಾಯಿತಿ ಮತ್ತು ಸುತ್ತಮುತ್ತಲಿನ ೧೨ ಹಳ್ಳಿಗಳನ್ನು ಒಳಗೊಂಡಂತೆ ೨೭ನೇ ವಾರದ ಕಾರ್ಯಕ್ರಮ ತಲುಪಿದ್ದೇವೆ. ಪ್ರತಿ ಶುಕ್ರವಾರ ಒಂದು ಗ್ರಾಮ ಪಂಚಾಯಿತಿ ಅಥವಾ ಪಟ್ಟಣದ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳಿಗೆ ಮುಕ್ತಿ ಹಾಡುವ ಗುರಿ ಹೊಂದಿದ್ದೇವೆ ಎಂದರು.


ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು, ನಮ್ಮ ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಜನರ ಮತ್ತು ಸರ್ಕಾರದ ನಡುವಿನ ಅಂತರವನ್ನು ಕಡಿಮೆ ಮಾಡುವುದು. ಇಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲ, ಲಂಚದ ಆಮಿಷಗಳಿಲ್ಲ. ಸಾರ್ವಜನಿಕರು ನೇರವಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಕೆಲಸ ಮಾಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದರು.
ಹುಳಿಯಾರಿನ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ೯೦ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ಆಸ್ಪತ್ರೆ ಅಭಿವೃದ್ಧಿಗಾಗಿ ೭.೫ ಕೋಟಿ ರೂಪಾಯಿ ವ್ಯಯಿಸಲಾಗಿದೆ, ಅಮೃತ್ ಯೋಜನೆ, ಸಿಸಿ ರಸ್ತೆಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದರು.


ಮುಂದಿನ ೩೦ ವರ್ಷಗಳ ಕಾಲ ನೀರಿನ ಸಮಸ್ಯೆ ಎದುರಾಗದಂತೆ ಎಸ್‌ಎಫ್‌ಸಿ ಮತ್ತು ಯುಐಡಿಎಸ್‌ಎಸ್‌ಎಂಟಿ ಯೋಜನೆಗಳಡಿ ಶಾಶ್ವತ ಪರಿಹಾರ ರೂಪಿಸಲಾಗಿದೆ ಎಂಬ ಮಾಹಿತಿ ನೀಡಿದರು. ಪಟ್ಟಣದ ವಿವಿಧ ಭಾಗಗಳಲ್ಲಿ ಹೊಸದಾಗಿ ೫ ಬೋರ್‌ವೆಲ್‌ಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಲಾಗಿದೆ. ಇದರಿಂದ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದರು.


ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಸುರೇಶ್ ಬಾಬು ಅವರು, ಬಿಸಿಲು ಹೆಚ್ಚಾಗಿರುವುದರಿಂದ ಸಾರ್ವಜನಿಕರು ಆರೋಗ್ಯದ ಕಡೆ ಗಮನಹರಿಸಬೇಕು. ನಿರ್ಜಲೀಕರಣ ಆಗದಂತೆ ಎಚ್ಚರ ವಹಿಸಬೇಕು. ಕೊರೊನಾದಂತಹ ಮಹಾಮಾರಿಯನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ನಾವು ಎಷ್ಟೇ ಸಂಪಾದನೆ ಮಾಡಿದರೂ ಅದನ್ನು ಆಸ್ಪತ್ರೆಗೆ ಸುರಿಯುವಂತಾಗಬಾರದು. ಆದ್ದರಿಂದ ಕೆಲಸದ ನಡುವೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಘವೇಂದ್ರ, ಉಪಾಧ್ಯಕ್ಷೆ ಕಾವ್ಯ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಮ್ಮ, ತಾಪಂ ಮಾಜಿ ಸದಸ್ಯ ಎಚ್.ಎನ್.ಕುಮಾರ್, ಮುಖ್ಯಾಧಿಕಾರಿ ಮಂಜುನಾಥ್ ಎಲ್.ವಿ, ಕೌನ್ಸಿಲರ್‌ಗಳಾದ ಹೇಮಂತ್ ಕುಮಾರ್, ದಯಾನಂದ್, ವೈದ್ಯಾಧಿಕಾರಿ ಡಾ.ಕೃಷ್ಣ, ಮುಖಂಡರಾದ ರಾಘವೇಂದ್ರ, ಕಿರಣ್‌ಕುಮಾರ್, ಗೌಡಿ, ರೈತ ಸಂಘದ ಅಧ್ಯಕ್ಷ ಬೀರಪ್ಪ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.