
ಬೀದರ, ಆ 03:ಬೀದರಿನ ಸಂಗೀತ ಕಲಾಮಂಡಲದ ಸಂಸ್ಥಾಪಕ ದಿವಂಗತ ಜಗಪಾಲ ಸಿಂಗ್ ಪವಾರರ 26ನೇ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ಬೀದರಿನ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಆಯೋಜಿಸಿದ ಜಗ್ಪಾಲ್ ಸಿಂಗ್ ಪವಾರ್(ಜೆಎಸ್ಪಿ) ಪ್ರಶಸ್ತಿ ಪ್ರದಾನ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಪಡೆದ ಕಲಾವಿದ ಪಂಡಿತ್ ಜಯತೀರ್ಥ ಮೇವುಂಡಿ ಅವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಜನಮನ ಸೂರೆಗೊಂಡಿತು.
ಶ್ರೀಯುತರು ಪ್ರಾರಂಭದಲ್ಲಿ ಮಧ್ಯಲಯ ಝಪತಾಲದಲ್ಲಿ ಮೇಘ ಮಲ್ಹಾರ ರಾಗದ “ಗರಜೇ ಘಟ ಘಟಾ..” ಖ್ಯಾಲನ್ನು ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ನಂತರ ಇದೇ ರಾಗದ “ಋತು ಸಾವನ ಭಾವನ ಕೋ..”ಛೋಟಾ ಖ್ಯಾಲ್ ಹಾಗೂ ನಂತರ ತರಾನಾವನ್ನು ಸುಮಧುರವಾಗಿ ಹಾಡಿ ಪ್ರೇಕ್ಷಕರ ಹೃನ್ಮನ ಗೆದ್ದರು. ಇದಲ್ಲದೆ “ಕೇತಕೀ ಗುಲಾಬ ಕೀ..”ಹಾಡನ್ನು ಬಸಂತರಾಗದಲ್ಲಿ ಹಾಡಿದರು.
ಜಯತೀರ್ಥ ಮೇವುಂಡಿ ಅವರ ವಿವಿಧ ರಾಗಗಳ ಹೃದಯಸ್ಪರ್ಶಿ ಸ್ವರಾಲಾಪನೆಯ ಪ್ರಬುದ್ಧ ಏರಿಳಿತದ ಗಾಯನಕ್ಕೆ ಮಾರು ಹೋದ ಪ್ರೇಕ್ಷಕರು ಗಾಯನದ ಉದ್ದಕ್ಕೂ “ಕ್ಯಾ ಬಾತ್ ಹೈ!, ಕ್ಯಾ ಬಾತ್ ಹೈ!” ಎಂದು ಹರ್ಷೋದ್ಗಾರ ಮಾಡಿದರು. ಪದೇಪದೇ ಚಪ್ಪಾಳೆ ತಟ್ಟಿ ಮೇವುಂಡಿ ಗಾಯನಕ್ಕೆ ತಮ್ಮ ಸಂತೋಷ ಹಾಗೂ ಬೆಂಬಲ ವ್ಯಕ್ತಪಡಿಸಿದರು. ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಅವರು ಠುಮರಿ, ವಚನವನ್ನು ಸಹ ಅತ್ಯಂತ ಸುಮಧುರವಾಗಿ ಹಾಡಿದರು. ಇವರ ಗಾಯನಕ್ಕೆ ಆತೀಶ್ ಜೋಶಿ ತಬಲಾ, ಶ್ರೀ ಕೃಷ್ಣ ಮುಖೇಡಕರ್ ಹಾರ್ಮೋನಿಯಂ ಹಾಗೂ ಮಾಸ್ಟರ್ ವಿಶ್ವ ಬಿರಾದಾರ್ ತಾನಪುರ ಸಾಥ್ ನೀಡಿದರು.
ನಂತರ ಕೃಷ್ಣ ಮುಖೇಡ್ಕರ್ ಯಮನ್ ರಾಗದ ಛೋಟಾ ಖ್ಯಾಲ್ ಮತ್ತು ಭೈರವಿ ರಾಗದಲ್ಲಿ ವಚನವನ್ನು ಪ್ರಸ್ತುತಪಡಿಸಿ ಎಲ್ಲರ ಗಮನ ಸೆಳೆದರು. ಇದಕ್ಕೂ ಮುನ್ನ ರಮೇಶ್ ಕೊಳಾರೆ ತಬಲಾ, ಜಗನ್ನಾಥ್ ನಾನಕೇರಿ ಹಾರ್ಮೋನಿಯಂ ಮತ್ತು ತರುಣ್ ಕುಮಾರ್ ಚಂದನ್ ತಾಳವಾದ್ಯದ ಸಹಕಾರದಲ್ಲಿ ಮಾಸ್ಟರ್ ವಿಶ್ವ ಬಿರಾದಾರ್ ಸಹ ವಚನ ಹಾಗೂ ವಿವಿಧ ಭಕ್ತಿ ಗೀತೆಗಳನ್ನು ಹಾಡಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮುಳೆ ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಕಲಾವಿದ ಪಂಡಿತ್ ರಾಮಲು ಗಾದಗಿ ಅವರಿಗೆ 2026 ನೇ ಸಾಲಿನ ಜಗಪಾಲ್ ಸಿಂಗ್ ಪವಾರ್(ಜೆಎಸ್ಪಿ) ಪ್ರಶಸ್ತಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಪಂಡಿತ ಜಯತೀರ್ಥ ಮೇವುಂಡಿ, ಶಿವಾನಿ ಶಿವದಾಸ, ಶ್ರೀ ಕೃಷ್ಣ ಮುಖೇಡ್ಕರ್ ಮತ್ತು ಮಾಸ್ಟರ್ ವಿಶ್ವ ಬಿರಾದಾರ್ ಅವರನ್ನು ಸಹ ವಿಶೇಷವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಗೀತ ಕಲಾಮಂಡಳದ ಅಧ್ಯಕ್ಷ ರಾಜೇಂದ್ರ ಸಿಂಗ್ ಪವಾರ್, ಕಾರ್ಯದರ್ಶಿ ಸಂಗಮಕರ್ ಮತ್ತಿತರ ಪದಾಧಿಕಾರಿಗಳು, ಧಾನ್ಯ ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜ ಧನ್ನೂರಕರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ, ನೂಪುರ್ ನೃತ್ಯ ಅಕಾಡೆಮಿ ಅಧ್ಯಕ್ಷೆ ಉಷಾ ಪ್ರಭಾಕರ್ ಸಮಾರಂಭದಲ್ಲಿ ಭಾಗವಹಿಸಿದ್ದರು. ವಿದ್ಯಾ ಲದ್ದೆ ಮತ್ತು ಶಿವರಾಜ್ ಕಲಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.






























