
ತುಮಕೂರು, ಮೇ ೧೧- ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ರೆಡ್ಡಿ ಜನಸಂಘದ ಸಂಯುಕ್ತಾಶ್ರಯದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸಚಿವ ಸುಧಾಕರ್ ಅವರ ನಿಧನದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಮೊದಲಿಗೆ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ಸುಧಾಕರ್ ಅವರ ನಿಧನಕ್ಕೆ ಒಂದು ನಿಮಿಷಗಳ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಂತರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಸ್ತ ಸ್ತ್ರೀಕುಲಕ್ಕೆ ಆದರ್ಶಪ್ರಾಯರು. ಪಾಮರರಾಗಿದ್ದ ಪತಿಯನ್ನು ಪಂಡಿತನನ್ನಾಗಿ ಬದಲಾಯಿಸಿದ್ದಲ್ಲದೆ, ಪತೀತನಾಗಿದ್ದ ಮೈದುನನನ್ನು ಮಹರ್ಷಿಯಾಗಿ ಬದಲಾಯಿಸಿ, ತನ್ನ ಕುಟುಂಬದ ಘನತೆ, ಗೌರವವನ್ನು ಎತ್ತಿ ಹಿಡಿಯುವ ಮೂಲಕ ಸಣ್ಣ ಪುಟ್ಟ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗದೆ ವಿಚ್ಚೇಧನಕ್ಕೆ ಮೊರೆ ಹೋಗುವ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಕರಾದ ಈಶ್ವರ್ ಕು ಮಿರ್ಜಿ, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷರಾದ ಕೆ. ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಬಿ.ಆರ್. ಮಧು, ಜಂಟಿ ಕಾರ್ಯದರ್ಶಿ ಕೆ.ಜೆ. ರಾಜಗೋಪಾಲರೆಡ್ಡಿ, ಖಜಾಂಚಿ ಎಂ.ಎ.ಶಿವಾರೆಡ್ಡಿ, ನಿರ್ದೇಶಕರಾದ ಕೆ. ನಿರ್ಮಲ, ವಿಜಯಲಕ್ಷ್ಮಿ, ಪಿ. ಶಶಿಕಲಾ, ಎಸ್.ಕೆ. ಮಲ್ಲಿಕಾರ್ಜುನ್, ಕೆ.ವಿ. ಉಪನ್ಯಾಸಕರಾದ ವೆಂಕಟರೆಡ್ಡಿ ರಾಮರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.


























