Home ಜಿಲ್ಲೆ ಯಾದಗಿರಿ ಜಿಲ್ಲೆಯಲ್ಲಿ ಬಿಸಿಗಾಳಿ ಎಚ್ಚರಿಕೆ: ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಜಿಲ್ಲಾಧಿಕಾರಿ ಸೂಚನೆ

ಯಾದಗಿರಿ ಜಿಲ್ಲೆಯಲ್ಲಿ ಬಿಸಿಗಾಳಿ ಎಚ್ಚರಿಕೆ: ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಜಿಲ್ಲಾಧಿಕಾರಿ ಸೂಚನೆ

ಯಾದಗಿರಿ: ಮೇ.೪:ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಯಾದಗಿರಿ ಜಿಲ್ಲೆಯಲ್ಲಿ ಮೇ ೦೩ರಿಂದ ೦೫ರವರೆಗೆ ತೀವ್ರ ಬಿಸಿಗಾಳಿ (ಹೀಟ್ ವೆವ್) ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆ “ಯೆಲ್ಲೋ ಅಲರ್ಟ್” ಘೋಷಿಸಲಾಗಿದೆ. ಈ ಕುರಿತು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ.

ಬಿಸಿಗಾಳಿ ಹಾಗೂ ಹೀಟ್ ಸ್ಟ್ರೋಕ್ ಪರಿಣಾಮದಿಂದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ, ಮಧ್ಯಾಹ್ನ ೧೨ರಿಂದ ಸಂಜೆ ೪ರವರೆಗೆ ಅನಾವಶ್ಯಕವಾಗಿ ಹೊರಗೆ ಸಂಚರಿಸುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ದೇಹದಲ್ಲಿ ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸುವುದು, ಹಗುರವಾದ, ತಿಳಿ ಬಣ್ಣದ ಹಾಗೂ ಸಡಿಲ ಹತ್ತಿ ಉಡುಪುಗಳನ್ನು ಧರಿಸುವುದು ಅತ್ಯಂತ ಅಗತ್ಯವಾಗಿದೆ.

ಬಿಸಿಲಿನಲ್ಲಿ ಹೊರಗೆ ತೆರಳುವಾಗ ಛತ್ರಿ, ಟೋಪಿ, ಸನ್‌ಗ್ಲಾಸ್ ಹಾಗೂ ಪಾದರಕ್ಷೆಗಳನ್ನು ಬಳಸುವುದು ಸೂಕ್ತ. ಹೆಚ್ಚಿನ ತಾಪಮಾನ ಇರುವ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ತಪ್ಪಿಸಿ, ದೇಹವನ್ನು ನಿರ್ಜಲೀಕರಣಗೊಳಿಸುವ ಮದ್ಯ, ಚಹಾ, ಕಾಫಿ ಹಾಗೂ ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸಬಾರದು ಎಂದು ಸೂಚಿಸಲಾಗಿದೆ. ಬದಲಿಗೆ ಔಖS, ನಿಂಬೆ ನೀರು, ಮಜ್ಜಿಗೆ, ಲಸ್ಸಿ, ತೋರಣಿ ಮುಂತಾದ ದ್ರವಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಲಾಭಕರವಾಗಿದೆ.

ಹೊರಾಂಗಣದಲ್ಲಿ ಕೆಲಸ ಮಾಡುವವರು ತಲೆ, ಕುತ್ತಿಗೆ ಹಾಗೂ ಮುಖವನ್ನು ರಕ್ಷಿಸಲು ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಟ್ಟುಹೋಗಬಾರದು. ದೇಹದಲ್ಲಿ ಅಸ್ವಸ್ಥತೆ ಕಂಡುಬAದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು.

ಜಾನುವಾರುಗಳ ರಕ್ಷಣೆಯ ದೃಷ್ಟಿಯಿಂದ ಅವುಗಳನ್ನು ನೆರಳಿನಲ್ಲಿ ಇಟ್ಟು, ಸಾಕಷ್ಟು ನೀರು ಒದಗಿಸಬೇಕು. ಮುಂಜಾನೆ ಮತ್ತು ಸಾಯಂಕಾಲ ಸಮಯದಲ್ಲಿ ಮಾತ್ರ ಮೇಯಲು ಬಿಡುವುದು, ಮಧ್ಯಾಹ್ನದ ಬಿಸಿಲಿನಲ್ಲಿ ಕೊಟ್ಟಿಗೆಯಲ್ಲಿ ಅಥವಾ ನೆರಳಿನಲ್ಲಿ ಇರಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ. ನಿರ್ಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಬೆಲ್ಲ, ಲಿಂಬೆ ರಸ ಮಿಶ್ರಿತ ನೀರನ್ನು ನೀಡುವಂತೆ ಸೂಚಿಸಲಾಗಿದೆ.

ರೈತರು ಹೊಲದಲ್ಲಿ ಕೆಲಸ ಮಾಡುವಾಗ ಟೋಪಿ ಅಥವಾ ಛತ್ರಿ ಬಳಸಬೇಕು. ಭೂಮಿಯ ಫಲವತ್ತತೆ ಕಾಪಾಡಲು ಮೇವು ಸುಡುವುದನ್ನು ತಪ್ಪಿಸಿ, ಸಂಗ್ರಹಿಸುವ ಕ್ರಮಗಳನ್ನು ಅನುಸರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಂಪಾದ ಸ್ಥಳದಲ್ಲಿ ಇರಿ, ಸಾಕಷ್ಟು ನೀರು ಹಾಗೂ ಮಜ್ಜಿಗೆ ಸೇವಿಸಿ, ಹತ್ತಿ ಉಡುಪುಗಳನ್ನು ಧರಿಸಿ, ಬಿಸಿಲಿನ ಅವಧಿಯಲ್ಲಿ ವಿಶ್ರಾಂತಿ ಪಡೆಯಿರಿ.

ನೇರ ಬಿಸಿಲಿಗೆ ಒಡ್ಡಿಕೊಳ್ಳಬೇಡಿ, ಕಪ್ಪು ಅಥವಾ ಸಿಂಥಟಿಕ್ ಉಡುಪುಗಳನ್ನು ಧರಿಸಬೇಡಿ, ಬಿಸಿಲಿನಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬೇಡಿ, ಬಿಸಿ ಪಾನೀಯಗಳು ಹಾಗೂ ಮದ್ಯ ಸೇವನೆ ತಪ್ಪಿಸಿ.

ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ತಕ್ಷಣ ತಂಪಾದ ಸ್ಥಳಕ್ಕೆ ಕರೆದೊಯ್ಯಬೇಕು ಹಾಗೂ ಪ್ರಾಥಮಿಕ ಚಿಕಿತ್ಸೆ ನೀಡಬೇಕು. ವಿಳಂಬವಿಲ್ಲದೆ ವೈದ್ಯಕೀಯ ನೆರವು ಪಡೆಯುವುದು ಅತ್ಯಾವಶ್ಯಕ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.